ಶ್ರೀಲಂಕಾ ಸರಣಿ ಸ್ಫೋಟ : ಸತ್ತವರ ಸಂಖ್ಯೆ 360ಕ್ಕೇ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೋ, ಏ.24-ಈಸ್ಟರ್ ಸಂಡೆ ದಿನದಂದು ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಐಸಿಸ್ ಉಗ್ರಗಾಮಿಗಳು ನಡೆದ ಸರಣಿ ಮಾನವ ಬಾಂಬ್ ಸ್ಫೋಟದಲ್ಲಿ ಸತ್ತವರ ಸಂಖ್ಯೆ 360ಕ್ಕೇರಿದೆ.

ಐದು ಚರ್ಚ್‍ಗಳು ಮತ್ತು ಮೂರು ಐಷಾರಾಮಿ ಹೋಟೆಲ್‍ಗಳಲ್ಲಿ ನಡೆದ ಭಯೋತ್ಪಾದಕರ ದಾಳಿ ನಂತರ ಕೊಲಂಬೋ ಸಾವಿನ ಮನೆಯಾಗಿದ್ದು, ಮೃತರ ಸಂಖ್ಯೆ ಏರುತ್ತಲೇ ಇದೆ. ಗಾಯಗೊಂಡ 600ಕ್ಕೂ ಹೆಚ್ಚು ಜನರಲ್ಲಿ ಕೆಲವರ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕವಿದೆ ಎಂದು ಉನ್ನತಾಧಿಕಾರಿಗಳು ಹೇಳಿದ್ದಾರೆ.

ಸರಣಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಹಲವು ಶಂಕಿತರನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ತಿಳಿಸಿದ್ಧಾರೆ. 350ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಎಂಟು ಸರಣಿ ಸ್ಫೋಟದಿಂದ ಶ್ರೀಲಂಕಾ ಸರ್ಕಾರವೇ ಹೆದರಿ ಕಂಗಲಾಗಿದೆ.

ಇಷ್ಟು ತೀವ್ರತೆಯ ಬಾಂಬ್ ದಾಳಿಗಳನ್ನು ದ್ವೀಪರಾಷ್ಟ್ರದ ಸರ್ಕಾರ ನಿರೀಕ್ಷಿಸಿರಲಿಲ್ಲ. ಒಂದು ದಶಕದ ನಂತರ ನಡೆದ ಭಯೋತ್ಪಾದಕರ ಪೈಶಾಚಿಕ ಕೃತ್ಯದಿಂದ ಕಂಗೆಟ್ಟಿರುವ ರಕ್ಷಣಾ ಇಲಾಖೆಯೂ ಕೂಡ ಮುಂದೆ ಇದೇ ರೀತಿಯ ದಾಳಿಗಳು ನಡೆಯಬಹುದೆಂಬ ಆತಂಕದಲ್ಲಿದೆ.

ಆತ್ಮಾಹತ್ಯಾ ದಾಳಿ ನಡೆಯುವ ಸಾಧ್ಯತೆ ಬಗ್ಗೆ ನಮಗೆ 10 ದಿನಗಳ ಮುನ್ನವೇ ಗುಪ್ತಚಾರ ಮಾಹಿತಿ ಇತ್ತು. ಆದರೆ ಇಷ್ಟು ಪ್ರಬಲ ಸ್ವರೂಪದಲ್ಲಿ ಬಾಂಬ್ ದಾಳಿಗಳು ನಡೆದು ಸಾವು-ನೋವುಗಳು ಸಂಭವಿಸುತ್ತವೆ ಎಂಬುದನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ರಕ್ಷನಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ನಿನ್ನೆಯಷ್ಟೇ ಆತಂಕದಿಂದ ಪ್ರತಿಕ್ರಿಯಿಸಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )