ಅಂಗಡಿ ಮಾಲೀಕನ ಹಿಗ್ಗಾಮುಗ್ಗ ಥಳಿಸಿದ ಪೇದೆ : ಕ್ರಮಕ್ಕೆ ಜನತೆ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

 

5

ಬೈಲಹೊಂಗಲ,ಜ.7- ಪಟ್ಟಣದ ವಿಜಯ ಝರಾಕ್ಸ್‍ನಲ್ಲಿ ಪೊಲೀಸ್ ಪೇದೆಯೋರ್ವ ಆಧಾರ ಕಾರ್ಡ್‍ಗೆ ಅರ್ಜಿ ಸಲ್ಲಿಸಿದ್ದು ಅದನ್ನು ನೀಡಿಲ್ಲವೆಂಬ ಕಾರಣವೊಡ್ಡಿ ಅಂಗಡಿ ಮಾಲೀಕನೋರ್ವನನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ನಿನ್ನೆ ನಡೆದಿದೆ. ಪೊಲೀಸ್ ಪೇದೆ ಪ್ರಕಾಶ ಗೇಡಿ ಎಂಬಾತ ಇಲ್ಲಿನ ವಿಜಯ ಝರಾಕ್ಸನಲ್ಲಿ ಸುಮಾರು ಎರಡು ತಿಂಗಳ ಹಿಂದೆ ಆಧಾರ ಕಾರ್ಡ್ ನೋಂದಣಿ ಮಾಡಿಸಿದ್ದ. ನಿನ್ನೆ ಅಂಗಡಿಗೆ ಬಂದು ಈ ಕುರಿತು ವಿಚಾರಿಸಿದಾಗ ಮಾಲಿಕ ವಿಜಯ ಕುಲಕರ್ಣಿ ನಿಮ್ಮ ಆಧಾರ ನೋಂದಣಿ ಮೇಲ ಹಂತದಲ್ಲಿ ತಮ್ಮ ಅರ್ಜಿ ತಡೆ ಹಿಡಿಯಲಾಗಿದೆ ಎಂದಿದ್ದಾರೆ.ಆಗ ಕೋಪಗೊಂಡ ಪೇದೆ ನಾನು ನೀಡಿದ ರೂ. 170 ಹಣ ಮರಳಿ ನೀಡುವಂತೆ ಕೇಳಿದ್ದು ಅಂಗಡಿಕಾರ ಆತನಿಗೆ ಹಣ ವಾಪಸ ನೀಡಿದ್ದಾರೆ. ನಂತರ ಪೇದೆ ನಿನಗೆ ಸರಿಯಾಗಿ ಕೆಲಸ ನಿರ್ವಹಿಸಲು ಆಗದಿದ್ದರೆ ಈ ರೀತಿ ಮಾಡಬಾರದೆಂದು ಪೊಲೀಸ್ ದರ್ಪ ತೋರಿಸಿದ್ದು ಇದರಿಂದ ಮಾಲಿಕ ಮತ್ತು ಪೇದೆ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಪೇದೆ ಗೇಡಿ ಅಂಗಡಿ ಮಾಲೀಕ ವಿಜಯ ಕುಲಕರ್ಣಿ ಅವರ ಮೇಲೆ ಸಾರ್ವಜನಿಕರ ಎದುರೆ ಗುಂಡಾಗಿರಿ ಪದರ್ಶಿಸಿದ್ದು ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಪೊಲೀಸ ಪೇದೆಯ ನೈತಿಕ ಗುಂಡಾಗಿರಿಯನ್ನು ನಾಗರಿಕರು ತೀವ್ರವಾಗಿ ಖಂಡಿಸಿದ್ದಾರೆ. ವಿಜಯ ಅವರನ್ನು ಬೈಕ್ ಮೇಲೆ ಠಾಣೆಗೆ ಕರೆದುಕೊಂಡು ಹೋಗಿ ಠಾಣೆಯ ಮುಂಭಾಗದಲ್ಲಿಯೇ ಬೂಟುಗಾಲಿನಿಂದ ಒದ್ದು ಮನಬಂದಂತೆ ಥಳಿಸಿದ್ದಾನೆ. ಇದರಿಂದ ಗಾಯಗೊಂಡ ವಿಜಯ ಅವರನ್ನು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪಿಎಸ್‍ಐ ಶಿವಕುಮಾರ ಮುಚ್ಚಂಡಿ ಅವರನ್ನು ಪತ್ರಕರ್ತರು ಸಂಪರ್ಕಿಸಿದಾಗ ಇದು ನನ್ನ ಗಮನಕ್ಕೆ ಬಂದಿದ್ದು ಈ ಕುರಿತು ಪೇದೆಯನ್ನು ವಿಚಾರಿಸಲಾಗುವುದು ಎಂದರು.

ಸಾರ್ವಜನಿಕವಾಗಿ ಅಂಗಡಿ ಮಾಲೀಕನೋರ್ವರನ್ನು ಮನಬಂದಂತೆ ಥಳಿಸಿ ನೈತಿಕ ಪೊಲೀಸ್ ಗುಂಡಾಗಿರಿ ಪ್ರದರ್ಶಿಸುತ್ತಿರುವುದು ತೀವ್ರ ಖಂಡನೀಯ. ಇದರಿಂದ ಮಾನವ ಹಕ್ಕುಗಳು ಸಂಪೂರ್ಣ ಉಲ್ಲಂಘನೆಯಾಗಿದ್ದು ತಕ್ಷಣ ಮೇಲಾಧಿಕಾರಿಗಳು ಪೇದೆ ಮೇಲೆ ಕ್ರಮ ಕೈಗೊಂಡು ಆತನನ್ನು ಅಮಾನತ್ತು ಗೊಳಿಸಬೇಕು.

     – ಶಿವಾನಂದ ಕೋಲಕಾರ, ಕರವೇ ಜಿಲ್ಲಾ ಸಂಚಾಲಕ.

ಅಮಾಯಕ ಅಂಗಡಿಕಾರನ ಮೇಲೆ ಪೊಲೀಸ್ ಪೇದೆ ಸಾರ್ವಜನಿಕರ ಮುಂದೆ ಹಿಗ್ಗಾಮುಗ್ಗಾ ಥಳಿಸಿದ್ದು ತೀವ್ರ ಖಂಡನೀಯವಾಗಿದ್ದು ತಕ್ಷಣ ಮೇಲಾಧಿಕಾರಿಗಳು ಪೇದೆಯ ಮೇಲೆ ಕ್ರಮ ಕೈಗೊಂಡು ಸೇವೆಯಿಂದ ಅಮಾತ್ತುಗೊಳಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರು ಪೊಲೀಸ್ ಠಾಣೆ ವಿರುದ್ದ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು.
         – ರಫೀಕ ಬಢೇಘರ, ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗದ ತಾಲೂಕು ಘಟಕ, ಬೈಲಹೊಂಗಲ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin