`ಅ’ಕಾರ ಪ್ರಿಯರಾಗಿದ್ದ ಕಾಶೀನಾಥ್

ಈ ಸುದ್ದಿಯನ್ನು ಶೇರ್ ಮಾಡಿ

Anubhava--02

ಬೆಂಗಳೂರು, ಜ. 18- ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ, ತಮ್ಮ ವಿಶಿಷ್ಟ ಡೈಲಾಗ್‍ಗಳಿಂದಲೇ ಗಮನ ಸೆಳೆದಿದ್ದ ಕಾಶೀನಾಥ್ ಅವರು `ಅ’ ಕಾರ ಪ್ರಿಯರೆಂದರೇ ತಪ್ಪಾಗಲಾರದು. ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಕಾಶೀನಾಥ್ ಅವರು ತಮ್ಮ ಮೊದಲ ನಿರ್ದೇಶನದ ಅಪರೂಪದ ಅತಿಥಿಗಳು (1976) ಕೂಡ ಅ ಅಕ್ಷರದಿಂದಲೇ ಶುರುವಾದರೆ, ನಂತರ ಚಿತ್ರ ಅಪರಿಚಿತ ಕೂಡ ಕನ್ನಡ ಅಕ್ಷರಮಾಲೆಯ ಮೊದಲ ಅಕ್ಷರವನ್ನೇ ಅಲಂಕರಿಸಿದೆ.  ಅವರು ಅಭಿನಯಸಿದ ಮೊದಲ ಚಿತ್ರ ಅಮರ ಮಧುರ ಪ್ರೇಮ (1982), ನಟನಾಗಿ ಚಿರಪರಿಚಿತಗೊಂಡ ಅನುಭವ ಚಿತ್ರದಲ್ಲೂ `ಅ’ ಅನ್ನುವುದೇ ಮೊದಲ ಅಕ್ಷರ, ಅಲ್ಲದೆ ಆ ಚಿತ್ರದ ನಟಿಯ ಹೆಸರು ಕೂಡ ಅ (ಅಭಿನಯ)ದಿಂದಲೇ ಶುರುವಾಗುತ್ತದೆ.

ಕಾಶೀನಾಥ್ ಅಭಿನಯದ ಮೊದಲ ಸಸ್ಪೆನ್ಸ್ ಚಿತ್ರ ಅನಾಮಿಕ (1987) ದಲ್ಲೂ `ಅ’ ಕಾರದ ಮಹಿಮೆ ಇದೆ. ಕರಾಟೆಕಿಂಗ್ ಶಂಕರ್‍ನಾಗ್ ಅಭಿನಯದ ಅಕ್ಸಿಡೆಂಟ್ (ನಟ, ಸಹ ನಿರ್ದೇಶಕ), ಅವಳೇ ನನ್ನ ಹೆಂಡತಿ (1988), ಅವನೇ ನನ್ನ ಗಂಡ, ಅನಂತನ ಅವಾಂತರ, ಅದೃಷ್ಟ ರೇಖೆ (1989) ಹೀಗೆ ತಾವು ಅಭಿನಯಿಸಿದ ಚಿತ್ರಗಳಿಗೆ ಮೊದಲ ಅಕ್ಷರ `ಅ’ದಿಂದಲೇ ಪ್ರಾರಂಭವಾಗಿದೆ.1991ರಲ್ಲಿ ಕಾಶಿನಾಥ್ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿ ಅಭಿನಯಿಸಿದ್ದ ಅಜಗಜಾಂತರ ಚಿತ್ರವು ಅ ದಿಂದಲೇ ಆರಂಭಗೊಂಡಿದ್ದೆ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಕಾಶೀನಾಥ್‍ರನ್ನು ಮತ್ತೊಂದು ಮಜಲಿಗೆ ಕರೆದುಕೊಂಡು ಹೋಗಿತ್ತು.

ನಂತರ ಬಂದ ಅತಿಮಧುರ ಅನುರಾಗ (1992), ಅಹಾ ನನ್ನ ತಂಗಿ ಮದುವೆ (2004), ಅಪ್ಪಚ್ಚಿ (2007), ಆತ್ಮೀಯ (2008) ಕೂಡ ಅ ಅಕ್ಷರದಿಂದಲೇ ಪ್ರಾರಂಭವಾಗಿದ್ದು ಅವರಿಗೆ ಅ ಆಕ್ಷರದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತಿತ್ತು. ತಾವು ನಿರ್ಮಿಸಿ, ನಟಿಸಿ, ನಿರ್ದೇಶಿಸಿದ್ದ ಚಿತ್ರಗಳು ಮಾತ್ರ ಅ ಅಕ್ಷರದಿಂದ ಆರಂಭಗೊಂಡಿದ್ದಲ್ಲದೆ ಕಾಕತಾಳೀಯವೆಂಬಂತೆ ಕಾಶೀನಾಥ್ ಅವರು ತಮ್ಮ ಪುತ್ರನಿಗೆ ಅ ಅಕ್ಷರದಿಂದಲೇ ಆರಂಭಗೊಂಡಿರುವ ಅಲೋಕ್ ಎಂಬ ಹೆಸರಿಟ್ಟಿರುವುದು ಕೂಡ ಅವರಿಗೆ ಅ ಅಕ್ಷರದ ಮೇಲಿನ ಪ್ರೀತಿಯಿಂದಲೇ ಎಂದೆನಿಸುತ್ತದೆ. ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ ಅವರ ಪುತ್ರಿಯ ಹೆಸರು ಅಮೃತವರ್ಷಿಣಿ.

Facebook Comments

Sri Raghav

Admin