ಅಕ್ಕಮಹಾದೇವಿ ಸ್ತ್ರೀ ಸ್ವಾಭಿಮಾನದ ಪ್ರತೀಕ

ಈ ಸುದ್ದಿಯನ್ನು ಶೇರ್ ಮಾಡಿ

akkamahadevi

ಹಾಸನ, ಏ.13- ಶರಣ ಚಳವಳಿಯ ಪ್ರಮುಖರಾದ ಅಕ್ಕಮಹಾದೇವಿಯು ಸ್ತ್ರೀ ಸ್ವಾಭಿಮಾನದ ಪ್ರತೀಕ ಮತ್ತು ಭಕ್ತರಿಗೆ ಮಾದರಿಯಾಗಿದ್ದಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.ಮಹಾಸಂಸ್ಥಾನ ಹಾಸನ ಶಾಖಾ ಮಠದಲ್ಲಿ ನಡೆದ ಗುರು ತೋರಿದ ದಾರಿ ತಿಂಗಳಮಾಮನ ತೇರು 44ನೇ ಹುಣ್ಣಿಮೆ ಮತ್ತು ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಪ್ರಥಮ ಕವಯಿತ್ರಿಯಾದ ಅಕ್ಕಮಹಾದೇವಿ ಸ್ತ್ರೀಯರ ಮೇಲಿನ ಶೋಷಣೆಯನ್ನು ಭಕ್ತಿ ಮತ್ತು ಜ್ಞಾನ ಮಾರ್ಗದಿಂದ ಎದುರಿಸಿದವರು. ಅಕ್ಕನ ಕ್ರಾಂತಿಕಾರಿ ನಿಲುವು ಮತ್ತು ಸ್ವಾಭಿಮಾನದ ನಡೆ ಪುರುಷ ಪ್ರಧಾನ ಸಮಾಜಕ್ಕೆ ಸದಾ ಎಚ್ಚರಿಕೆಯ ಗಂಟೆಯಾಗಿದೆ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ  ಸ್ತ್ರೀಯರಿಗೆ ಪುರಾಣ ಕಾಲದಿಂದಲೂ ಉನ್ನತ ಸ್ಥಾನಮಾನ ನೀಡಲಾಗಿದೆ. ಭಕ್ತಿ ಮತ್ತು ಜ್ಞಾನ ಮಾರ್ಗದಲ್ಲಿ ಮಹಿಳೆಯರೂ ಮುಂಚೂಣಿಯಲ್ಲಿದ್ದರು ಎಂಬುದಕ್ಕೆ ಪೌರಾಣ ಕಾಲದಲ್ಲಿ ಯಾಜ್ಞವಲ್ಕ್ಯ ಋಷಿಯ ಬ್ರಹ್ಮಜ್ಞಾನವನ್ನು ದಿಟ್ಟ ಮಹಿಳೆ ಗಾರ್ಗಿಯು ಪ್ರಶ್ನಿಸಿದ ಪ್ರಸಂಗ ಸಾಕ್ಷಿಯಾಗಿದೆ. ವಿದ್ಯಾವಂತ ಮಹಿಳೆಯರಿಗೆ ಪ್ರಶ್ನಿಸುವ ಹಕ್ಕು ತನ್ನಿಂತಾನೆ ಬರುತ್ತದೆ ಎಂಬುದಕ್ಕೆ ಗಾರ್ಗಿ ಮತ್ತು ಅಕ್ಕಮಹಾದೇವಿಯವರು ಜ್ವಲಂತ ನಿದರ್ಶನವಾಗಿದ್ದಾರೆ. ಆದ್ದರಿಂದ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ವಿದ್ಯಾವಂತರಾಗಿ ಶೋಷಣೆಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.

ಭಕ್ತಿ ಮತ್ತು ಜ್ಞಾನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ಸಿದ್ಧಾರೂಢ ಮಠದ ಮಾತೃಶ್ರೀ ಉಮಾಭಾರತಿ ಅವರು, ಭಕ್ತಿ ಮತ್ತು ಜ್ಞಾನ ಇವೆರಡೂ ಮುಕ್ತಿ ಮಾರ್ಗಗಳು. ಆಧ್ಯಾತ್ಮ ಮಾರ್ಗ ಬಹಳ ಕಠಿಣವಾದುದು. ವೈರಾಗ್ಯ ಪಡೆಯುವುದು ಸುಲಭವಲ್ಲ ಎಂದು ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಮತ್ತು ನಿವೃತ್ತ ಅಧಿಕಾರಿ ಶಾಂತಿಗ್ರಾಮ ಮಂಜೇಶ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin