ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ವಿರುದ್ಧ ಕ್ರಮ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar---Session

ಬೆಳಗಾವಿ(ಸುವರ್ಣಸೌಧ), ನ.22- ಬಾಂಗ್ಲಾ ಅಕ್ರಮ ವಲಸಿಗರ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ 52 ಜನರನ್ನು ಗಡಿಪಾರು ಮಾಡಲಾಗಿದ್ದು, 53 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. 8 ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಹೇಳಿದರು.  ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಸುನೀಲ್‍ಕುಮಾರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಅಕ್ರಮ ವಲಸಿಗರ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

ಅಕ್ರಮ ವಲಸೆಯನ್ನು ತಡೆಗಟ್ಟಲು ಕಾರ್ಯಪಡೆಯನ್ನು ರಚಿಸಿದೆ. ಬಾಂಗ್ಲಾದಿಂದ ಅಕ್ರಮವಾಗಿ ಒಳನುಸುಳುವವರನ್ನು ತಡೆಗಟ್ಟುವುದು ರಾಜ್ಯಸರ್ಕಾರದ ಕೈಯಲ್ಲಿಲ್ಲ. ಅದನ್ನು ಕೇಂದ್ರ ಸರ್ಕಾರ ಮಾಡಬೇಕಾಗುತ್ತದೆ ಎಂದು ಬಿಜೆಪಿ ಶಾಸಕರಿಗೆ ತಿರುಗೇಟು ನೀಡಿದರು. ಒಟ್ಟಾರೆ ರಾಜ್ಯದಲ್ಲಿ ಬಾಂಗ್ಲಾದಿಂದ ಬಂದು ನೆಲೆಸಿರುವವರ ಸಂಖ್ಯೆ 748 ಇದ್ದು, ಅದರಲ್ಲಿ 253 ಮಂದಿ ಅಕ್ರಮವಾಗಿ ನೆಲೆಸಿದ್ದಾರೆ. ಮಂಡ್ಯದಲ್ಲಿ 16, ದಕ್ಷಿಣ ಕನ್ನಡದಲ್ಲಿ 17, ಕೆಜಿಎಫ್‍ನಲ್ಲಿ 3, ರಾಮನಗರದಲ್ಲಿ 11, ಮೈಸೂರು ಜಿಲ್ಲೆಯಲ್ಲಿ 13, ಚಿಕ್ಕಮಗಳೂರಿನಲ್ಲಿ 1, ಬೆಂಗಳೂರು ಜಿಲ್ಲೆಯಲ್ಲಿ 14, ಮೈಸೂರು ನಗರದಲ್ಲಿ 25, ಬೆಂಗಳೂರು ನಗರದಲ್ಲಿ 197, ಶಿವಮೊಗ್ಗದಲ್ಲಿ 7 ಜನ ನೆಲೆಸಿದ್ದಾರೆ ಎಂದು ಸದನಕ್ಕೆ ಗೃಹ ಸಚಿವರು ವಿವರ ನೀಡಿದರು.

ಬೆಂಗಳೂರು ನಗರದಲ್ಲಿ 24 ಬಾಂಗ್ಲಾ ವಲಸಿಗರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. ಕೆ.ಜಿ.ಬೋಪಯ್ಯ, ಜಗದೀಶ್‍ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್‍ಕುಮಾರ್, ಜೆಡಿಎಸ್‍ನ ಬಿ.ಬಿ.ನಿಂಗಯ್ಯ ಸೇರಿದಂತೆ ಹಲವು ಶಾಸಕರು ಈ ವಿಷಯದ ಬಗ್ಗೆ ಬೆಳಕು ಚೆಲ್ಲಿದರು.
ಸಚಿವರ ಈ ಉತ್ತರಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಬೋಪಯ್ಯ, ರಾಜ್ಯದಲ್ಲಿ 5 ಲಕ್ಷ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ಮಡಿಕೇರಿಯಲ್ಲಿ ಒಂದು ಲಕ್ಷ ಬಾಂಗ್ಲಾ ವಲಸಿಗರಿದ್ದಾರೆ. ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯಸರ್ಕಾರ ಆಂತರಿಕ ಸರ್ವೆ ಮಾಡಿ ಇವರನ್ನು ಪತ್ತೆ ಹಚ್ಚಬೇಕು ಎಂದರು.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಬಾಂಗ್ಲಾ ವಲಸಿರಿಗೆ ವೋಟರ್ ಐಡಿ, ರೇಷನ್‍ಕಾರ್ಡ್‍ಗಳನ್ನು ನೀಡಲಾಗುತ್ತಿದೆ. ದೇಶದ ಆಂತರಿಕ ಭದ್ರತೆಗೆ ಇದು ಸವಾಲಾಗಿ ಪರಿಣಮಿಸಿದೆ. ಈ ಸಂಬಂಧ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆತಂಕ ಎದುರಾಗಲಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin