ಅಕ್ರಮ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಮುಂದಾದ ಎಂಎಲ್‍ಸಿ ಪುತ್ರನ ವಿರುದ್ಧ ಬಿಎಂಟಿಎಫ್‍ಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

BMTF

ಬೆಂಗಳೂರು, ಡಿ.6- ಬಿಬಿಎಂಪಿಗೆ ಸೇರಿದ ಕ್ರೀಡಾ ಮೈದಾನದಲ್ಲಿ ಅಕ್ರಮವಾಗಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಮುಂದಾಗಿರುವ ಎಂಎಲ್‍ಸಿ ನಾರಾಯಣಸ್ವಾಮಿ ಅವರ ಪುತ್ರ ಸಾಗರ್ ವಿರುದ್ಧ ಬಿಎಂಟಿಎಫ್ ಪೊಲೀಸರಿಗೆ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್.ರಮೇಶ್ ದೂರು ನೀಡಿದ್ದಾರೆ. ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರ ಪುತ್ರ ಸಾಗರ್ ಎಂಬಾತ ಸಿ.ವಿ.ರಾಮನ್‍ನಗರ ವಿಧಾನಸಭಾ ಕ್ಷೇತ್ರದ ತಿಪ್ಪಸಂದ್ರ ವಾರ್ಡ್‍ನ ಎಚ್‍ಎಎಲ್ 3ನೇ ಹಂತದಲ್ಲಿರುವ ಪಾಲಿಕೆಯ ಶಿಶುಗೃಹ ಆಟದ ಮೈದಾನವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ.

ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಆಟದ ಮೈದಾನವನ್ನು ಒತ್ತುವರಿ ಮಾಡಿಕೊಂಡಿರುವ ಸಾಗರ್, ಯಾವುದೇ ಅನುಮತಿ ಪಡೆಯದೆ ಒತ್ತುವರಿ ಪ್ರದೇಶದಲ್ಲಿ ಕ್ರಿಕೇಟ್ ಅಕಾಡೆಮಿ ಸ್ಥಾಪಿಸಲು ಕಳೆದ 10 ದಿನಗಳಿಂದ ಕಾಂಕ್ರೀಟ್ ಕಾಮಗಾರಿ ಆರಂಭಿಸಿದ್ದಾರೆ.  ಮಾತ್ರವಲ್ಲ ಆಟದ ಮೈದಾನದ ಸಮೀಪವೇ ಇರುವ ನಿವೇಶನದಲ್ಲಿ 5 ಅಂತಸ್ತುಗಳ ಬೃಹತ್ ಕಟ್ಟಡ ನಿರ್ಮಿಸಿ ಫಸ್ಟ್‍ಟಚ್ ಎಂಬ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ.  ಸಾರ್ವಜನಿಕರ ಕ್ರೀಡಾ ಚಟುವಟಿಕೆಗೆ ಮೀಸಲಾಗಿರುವ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಾಮಗಾರಿ ನಡೆಸುತ್ತಿರುವ ಸಾಗರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪಾಲಿಕೆ ಆಸ್ತಿ ಒತ್ತುವರಿಯನ್ನು ತಡೆಗಟ್ಟುವಂತೆ ರಮೇಶ್ ಅವರು ಬಿಎಂಟಿಎಫ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದರ ಜತೆಗೆ ಪಾಲಿಕೆ ಕ್ರೀಡಾ ಮೈದಾನವನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ
ರಮೇಶ್ ಅವರು ಪತ್ರ ಬರೆದು ಒತ್ತಾಯಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin