ಅಕ್ರಮ ನೋಟು ವಹಿವಾಟು ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಪತ್ನಿಗೆ ಕಂಟಕ..!
ಬೆಂಗಳೂರು, ಡಿ.20- ಅಕ್ರಮ ನೋಟು ವಹಿವಾಟು ಪ್ರಕರಣ ಇದೀಗ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿಗೆ ಕಂಟಕವಾಗುವ ಸಾಧ್ಯತೆ ಇದೆ. ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿರುವ ಈ ಅಧಿಕಾರಿಣಿ ಕಾನೂನು ಬಾಹಿರವಾಗಿ 5 ರಿಂದ 6 ಕೋಟಿ 2000 ಮುಖಬೆಲೆಯ ನೋಟುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಿರಿಯ ಸಚಿವರೊಬ್ಬರಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಇದರ ಜಾಡು ಹಿಡಿದಿರುವ ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಈ ಅಧಿಕಾರಿಣಿಯನ್ನು ವಶಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಇದರ ಜತೆಗೆ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಆರ್ಬಿಐನ ಇನ್ನೂ ನಾಲ್ವರು ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬಂದಿರುವುದರಿಂದ ಏಕಕಾಲಕ್ಕೆ ಬಂಧಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ. ಬೆಂಗಳೂರು ಮೂಲದ ಹಾಗೂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈ ಸಚಿವರು ರಾಜಕೀಯ ವಲಯದಲ್ಲಿ ಸಾಕಷ್ಟು ಪ್ರಭಾವಿತರಾಗಿದ್ದಾರೆ. ತಮ್ಮ ಪ್ರಭಾವ ಬಳಸಿಕೊಂಡು ಆರ್ಬಿಐನಲ್ಲಿ 5 ರಿಂದ 6 ಕೋಟಿ ಹಣವನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ತಾಣದಲ್ಲೂ ಇದು ಹರಿದಾಡುತ್ತಿದ್ದು, ಆನ್ಲೈನ್ ಮೂಲಕ ಪ್ರಧಾನಿ ನರೇಂದ್ರಮೋದಿಗೆ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬಿಐ, ಇಡಿ ಮತ್ತು ಐಟಿ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಲಾಗಿದೆ. ಈಗಾಗಲೇ ಆನ್ಲೈನ್ನಲ್ಲಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು ನೀಡಲಾಗಿದ್ದು, ಈ ದೂರಿನ ಅನುಸಾರ ಐಪಿಎಸ್ ಅಧಿಕಾರಿಯ ಪತ್ನಿ ಮತ್ತು ಆರ್ಬಿಐನ ನಾಲ್ವರು ಅಧಿಕಾರಿಗಳನ್ನು ವಶಕ್ಕೆ ಪಡೆಯಲು ಇಡಿ ಮತ್ತು ಐಟಿ ಸಜ್ಜಾಗಿದೆ. ಯಾರು ಈ ಅಧಿಕಾರಿಣಿ..? ಕೆಲ ತಿಂಗಳ ಹಿಂದೆಯಷ್ಟೆ ಪೊಲೀಸ್ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ನನ್ನ ಆತ್ಮಹತ್ಯೆಗೆ ಈ ಮೂವರೇ ಕಾರಣ ಎಂದು ಅವರು ದೂರಿದ್ದರು.
ತನಿಖಾ ಸಂಸ್ಥೆಯೊಂದರ ಮುಖ್ಯ ಹುದ್ದೆಯಲ್ಲಿದ್ದ ಈ ಐಪಿಎಸ್ ಅಧಿಕಾರಿಗೆ ಬಳಿಕ ಸಿಐಡಿ ಕ್ಲೀನ್ಚಿಟ್ ನೀಡಿತ್ತು. ಮೂಲತಃ ಉತ್ತರ ಭಾರತದವರಾದ ಇವರ ಪತ್ನಿ ಬೆಂಗಳೂರಿನ ಆರ್ಬಿಐ ಶಾಖಾ ಕಚೇರಿಯಲ್ಲಿ ಮುಖ್ಯ ಹುದ್ದೆಯಲ್ಲಿದ್ದಾರೆ. ಪತಿಯ ಮೂಲಕ ಪತ್ನಿಯನ್ನು ಸಂಪರ್ಕಿಸಿದ ಬೆಂಗಳೂರು ಮೂಲದ ಪ್ರಭಾವಿ ಸಚಿವರೊಬ್ಬರು ನೋಟು ಬದಲಾವಣೆ ಮಾಡಿಕೊಟ್ಟರೆ ನಿಮ್ಮ ಪತಿಗೆ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ನೀಡುವ ಭರವಸೆ ನೀಡಿದ್ದರು. ಇದನ್ನು ನಂಬಿದ ಈ ಅಧಿಕಾರಿಣಿ ಮುಂದೆ ಆಗುವ ಯಾವುದೇ ಆಪತ್ತುಗಳನ್ನೂ ಆಲೋಚಿಸದೆ ಒಂದೇ ವಾರದಲ್ಲಿ ನೋಟು ಬದಲಾಯಿಸಿಕೊಟ್ಟಿದ್ದಾರೆ. ಈಗ ತನಿಖಾಧಿಕಾರಿಗಳು ಇದರ ಜಾಡು ಹಿಡಿದು ಅಧಿಕಾರಿಣಿ ಸೇರಿದಂತೆ ಆರ್ಬಿಐನ ಒಟ್ಟು ನಾಲ್ವರನ್ನು ಬಂಧಿಸಲು ಮುಂದಾಗಿದೆ. ಕಳೆದ ವಾರವಷ್ಟೆ ಕೊಳ್ಳೇಗಾಲ ಶಾಖಾ ಕಚೇರಿಯ ಹಿರಿಯ ವಿಶೇಷ ಸಹಾಯಕ ಅಧಿಕಾರಿ ಕೆ.ಮೈಕೆಲ್ ಹಾಗೂ ಮೂರು ದಿನಗಳ ಹಿಂದೆಯಷ್ಟೆ ಆರ್ಬಿಐ ಬ್ಯಾಂಕ್ನ ಹಿರಿಯ ವಿಶೇಷ ಸಹಾಯಕ ಅಧಿಕಾರಿ ಸದಾನಂದ ನಾಯಕ್ ಮತ್ತು ವಿಶೇಷ ಸಹಾಯಕ ಅಧಿಕಾರಿ ಎ.ಕೆ.ಕೆವಿನ್ ಅವರನ್ನು ಬಂಧಿಸಲಾಗಿತ್ತು.
Eesanje News 24/7 ನ್ಯೂಸ್ ಆ್ಯಪ್ – Click Here to Download