ಅಕ್ರಮ ಪ್ಲಾಸ್ಟಿಕ್ ಮಾರಾಟ : ಮಾಲೀಕರ ವಿರುದ್ಧ ಪ್ರಕರಣ

ಈ ಸುದ್ದಿಯನ್ನು ಶೇರ್ ಮಾಡಿ

arasikere

ಅರಸೀಕೆರೆ, ಆ.10- ನಗರದ ಪ್ರಮುಖ ಹೋಲ್‍ಸೇಲ್ ಅಂಗಡಿಗಳ ಮೇಲೆ ದಾಳಿ ಮಾಡಿದ ನಗರಸಭೆ ಆಯುಕ್ತರ ನೇತೃತ್ವದ ತಂಡ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಉತ್ಪನ್ನಗಳನ್ನು ಸೀಸ್ ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ಹಾಗೂ ರಾಷ್ಟ್ರೀಯ ಹೆದ್ದಾರಿ(206) ಬಿ.ಎಚ್.ರಸ್ತೆಯಲ್ಲಿರುವ ಪ್ರಮುಖ ಹೋಲ್‍ಸೇಲ್ ಹಾಗೂ ರಿಟೈಲ್ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡ ಸುಮಾರು ಒಂದು ಟನ್‍ಗೂ ಹೆಚ್ಚು ಪ್ಲಾಸ್ಟಿಕ್ ಕೈಚೀಲ, ಪ್ಲೇಟ್ಸ್, ಲೋಟ, ತಟ್ಟೆ, ಊಟದ ಮೇಜಿನ ಮೇಲೆ ಹಾಸುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೋಕೋಲ್‍ನಿಂದ ತಯಾರಿಸಿದ ನಾನಾ ಉತ್ಪನ್ನಗಳನ್ನು  ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು.
ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಮಾ.20ರಿಂದ ಪ್ಲಾಸ್ಟಿಕ್ ಬಳಕೆಯನ್ನು ರಾಜ್ಯದಲ್ಲಿ ಕಡ್ಡಾಯವಾಗಿ ಸರಕಾರ ನಿಷೇಧ ಮಾಡಿದೆ. ಹಾಗಿದ್ದು ನಗರದ ಕೆಲವು ಅಂಗಡಿಗಳಲ್ಲಿ ವ್ಯವಸ್ಥಿತವಾಗಿ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ನಡೆಯುತ್ತಿದ್ದ ಮಾಹಿತಿ ಇದ್ದುದ್ದರಿಂದ ದಾಳಿ ಮಾಡಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿಸಿರುವ ಪ್ಲಾಸ್ಟಿಕ್ ವಸ್ತುಗಳನ್ನು ಯಾರಾದರೂ ಮಾರಾಟ ಮಾಡಿದರೆ ನಿರ್ಧಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ, ಪ್ಲಾಸ್ಟಿಕ್ ಹಾಗೂ ಥರ್ಮೋಕೋಲ್‍ನಿಂದ ಸಿದ್ಧಪಡಿಸುವ ಉತ್ಪನ್ನಗಳು ಪರಿಸರಕ್ಕೆ ಹಾನಿಕಾರವಾಗಿದೆ ಅಲ್ಲದೇ ಮಾನವ ಮತ್ತು ಪ್ರಾಣಿ ಪಕ್ಷಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದಲೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ನಗರಸಭೆಯ ಪರಿಸರ ಅಭ್ಯಂತರ ಎಸ್.ಎಂ.ನವೀನ್, ನಗರಸಭೆ ಆರೋಗ್ಯ ನಿರೀಕ್ಷಕರಾದ ಕೃಷ್ಣಮೂರ್ತಿ, ರಮೇಶ್ ಹಾಗೂ ಪೌರಕಾರ್ಮಿಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin