ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಮಾ.25- ಗ್ರಾಮಗಳ ದಿನಸಿ ಅಂಗಡಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯ ಕೆಲ ಸಿಬ್ಬಂದಿಗಳು ನೇರ ಕಾರಣರಾಗಿದ್ದಾರೆ. ಮೊದಲು ಇದಕ್ಕೆ ಕಡಿವಾಣ ಹಾಕಿ ಎಂದು ಸದಸ್ಯ ಮಂಜುನಾಥ್ ಒತ್ತಾಯಿಸಿದರು.ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ತಮ್ಮಣ್ಣಗೌಡ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟಗಾರರಿಂದ 5 ರಿಂದ 10 ಸಾವಿರದವರೆಗೆ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಇದಕ್ಕೆ ಕಡಿವಾಣ ಹಾಕಿ.ಚಿಲ್ಕೂರು ಹೊಸಳ್ಳಿಯಿಂದ ಮಹಿಳೆಯರು ಸಾಕಷ್ಟು ಬಾರಿ ಗ್ರಾಮದಲ್ಲಿ ಮದ್ಯ ಮಾರಾಟ ತಡೆಗೆ ಒತ್ತಾಯಿಸಿದರೂ ಕ್ರಮ ಕೈಗೊಂಡಿಲ್ಲ. ಇನ್ನು ಬೇಲೂರಿನಲ್ಲಿ ಪೊಲೀಸರು ಅಕ್ರಮ ಚಟುವಟಿಕೆ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದನ್ನು ಬಿಟ್ಟು ರಾಜರೋಷವಾಗಿ ಮರಳು ದಂಧೆಕೋರರೊಂದಿಗೆ ಶಾಮೀಲಾಗಿ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

25 ಕೆಜಿ ಮೇವಿಗೆ 50 ರೂ.ಗಳಾದರೆ ಅದನ್ನು ಸಾಗಿಸುವುದಕ್ಕೆ 500 ರೂ.ಗಳು ತಗುಲುತ್ತಿದೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನೂಕೂಲವೆ ಜಾಸ್ತಿಯಾಗುತ್ತಿದೆ. ಆದ್ದರಿಂದ ಮೇವನ್ನು ಗ್ರಾಪಂ ಆವರಣದಲ್ಲಿಯೆ ವಿತರಿಸುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯ ರಂಗೇಗೌಡ ಒತ್ತಾಯಿಸಿದರು.ಮಂತ್ರಿಗಳು ನೋಡಿದ್ರೆ ನೀರು ಕೊಡುವುದಕ್ಕೆ 1 ಕೋಟಿಗೂ ಹೆಚ್ಚು ಹಣವಿದೆ ಎನ್ನುತ್ತಾರೆ. ಆದರೆ ನೀವು ಕೊಡುತ್ತಿಲ್ಲ ಜನರಿಗೆ ನಾವು ಏನು ಉತ್ತರ ಹೇಳುವುದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಪಂ ಅಧ್ಯಕ್ಷ ತಮ್ಮಣ್ಣಗೌಡ ಮಾತನಾಡಿ, ನೀರಿಗಾಗಿ ತಾಲೂಕಿನಾದ್ಯಂತ ಸಾಕಷ್ಟು ಜನರು ತೊಂದರೆ ಪಡುತ್ತಿದ್ದಾರೆ. ಆದರೆ ಕೊಳವೆ ಬಾವಿ ಕೊರೆಯುವರು ಸ್ವಲ್ಪ ನೀರು ಸಿಕ್ಕಿದರೆ ಸಾಕು ಹೊರಟು ಬರುತ್ತಾರೆ. ಇದರಿಂದ ಕೊಳವೆ ಬಾವಿಗಳಲ್ಲಿ ಕೆಲವೇ ದಿನಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಆಳವಾಗಿ ಕೊರೆಯಲು ತಿಳಿಸಿ ಎಂದರು.

ಸದಸ್ಯೆ ಸುಮಾ ಮಾತನಾಡಿ, ಹಳೇಬೀಡಿನಲ್ಲಿ ಒಂದು ಕೊಡ ನೀರಿಗಾಗಿ ಹಗಲೆಲ್ಲ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೆ ರೀ ಬೋರ್‍ಗಳನ್ನು ಮಾಡಿಸಿ ನೀರು ಕೊಡಿ ಎಂದರು. ತಾಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕುಳಿತುಕೊಳ್ಳಲು ಹಾಗೂ ಮಲಗಲು ಸೌಲಭ್ಯಗಳಿಲ್ಲದೆ ನೆಲದ ಮೇಲೆ ಮಲಗುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆ. ತಕ್ಷಣವೆ ಮಕ್ಕಳಿಗೆ ಬೇಕಾದ ಸೌಲಭ್ಯ ಕೊಡಿಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು. ಅಂಗನವಾಡಿ ಸಿಬ್ಬಂದಿಗಳು ತಮ್ಮ ವೇತನಕ್ಕೆ ಮಾತ್ರ ಪ್ರತಿಭಟಿಸಿದರೆ ಸಾಲದು, ತಮ್ಮ ಕೇಂದ್ರಗಳಿಗೆ ಬರುವ ಮಕ್ಕಳ ಭವಿಷ್ಯ ರೂಪಿಸುವುದಕ್ಕೂ ಮುಂದಾಗಬೇಕು ಎಂದರು.ಬಡವರು ಮನೆ ಕೆಲಸ ಮಾಡಿಸಲು ಶಾಮಿಲ್‍ಗಳಿಗೆ ಕುಯ್ಯಿಸಲು ಮರಗಳನ್ನು ತಂದರೆ ಅರಣ್ಯ ಇಲಾಖೆ ಕೆಲ ಸಿಬ್ಬಂದಿಗಳು ಅವರಿಂದ ಹಣ ಕೀಳುವಂತಹ ದಂಧೆ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಸದಸ್ಯ ರವಿಕುಮಾರ್ ಒತ್ತಾಯಿಸಿದರು.ಸಭೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಯ್ಯ, ಉಪಾಧ್ಯಕ್ಷೆ ತೀರ್ಥಮ್ಮ, ಇಒ ಮಲ್ಲೇಶಪ್ಪ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin