ಅಕ್ರಮ ಮದ್ಯ ಮಾರಾಟ : ಅಂಗಡಿ ಮಾಲೀಕಳ ಬಂಧನ
ಪಟ್ಟನಾಯಕನಹಳ್ಳಿ, ಅ.16- ಶಿರಾ ತಾಲೂಕಿನ ಮೇಲುಕುಂಟೆ ಗ್ರಾಮದ ಟೀ ಅಂಗಡಿ ಮತ್ತು ಚಿಲ್ಲರೆ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿ 2160 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು ಮಾಲೀಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜಯಲಕ್ಷ್ಮಿ(26) ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಂಧಿತ ಆರೋಪಿ.
ಮೇಲುಕುಂಟೆ ಗ್ರಾಮದ ಟೀ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಕೂಲಿ ಕಾರ್ಮಿಕರು ಮತ್ತು ಯುವಕರು ಕುಡಿತದ ಚಟಕ್ಕೆ ಬಿದ್ದಿದ್ದಾರೆ. ಅಲ್ಲದೆ, ಈ ರಸ್ತೆಯಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಗ್ರಾಮದ ಮಹಿಳೆಯರು ನೀಡಿದ್ದ ದೂರಿನ ಮೇರೆಗೆ ದಾಳಿ ಮಾಡಿದ ಪಿಎಸ್ಐ ಜಿ.ಪುರುಷೋತ್ತಮ್ ಅಂಗಡಿ ಮಾಲೀಕಳಾದ ಜಯಲಕ್ಷ್ಮಿಯನ್ನು ಬಂಧಿಸಿ 2160 ರೂಪಾಯಿ ಮೌಲ್ಯದ ರಾಜಾವಿಸ್ಕಿ ನಾಕ್ವೌಟ್ ಸೇರಿದಂತೆ ಹಲವರು ಬಗೆಯ ಮದ್ಯ ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿ ಜಯಲಕ್ಷ್ಮೀ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಕ್ರಮ ಮರಳು ಸಾಗಾಣಿಕೆ:
ತಾಲೂಕಿನ ಚಿಕ್ಕನ ಕೋಟೆ ಹಳ್ಳದಲ್ಲಿ ಅಕ್ರಮವಾಗಿ ಮರಳು ತುಂಬಿ ಟ್ರ್ಯಾಕ್ಟರ್ನಲ್ಲಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಕ್ಷಣ ಕಾರ್ಯ ಪ್ರವೃತ್ತರಾದ ಪಿಎಸ್ಐ ಜಿ.ಪುರುಷೋತ್ತಮ್ ಮತ್ತು ಸಿಬ್ಬಂದಿ ದಾಳಿಗೆ ಮುಂದಾದಾಗ ಸಾಗಾಣಿಕೆದಾರರು ಮರಳು ತುಂಬಿದ ಟ್ಯಾಕ್ಟರ್ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಸ್ಥಳದಲ್ಲಿದ್ದ ಮರಳು ತುಂಬಿದ ಸೋನಾಲಿಕ್ ಟ್ಯಾಕ್ಟರಿ ವಶ ಪಡಿಸಿ ಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ನ ಮಾಲೀಕನ ಪತ್ತೆಗೆ ಬಲೆ ಬೀಸಿದ್ದಾರೆ.
► Follow us on – Facebook / Twitter / Google+