ಅಕ್ರಮ ಮರಳು ಗಣಿಗಾರಿಕೆ ಖಂಡಿಸಿ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

gowribidanuru

ಗೌರಿಬಿದನೂರು, ಅ.4- ತಾಲೂಕಿನ ಜೀವನಾಡಿಯಾಗಿರುವ ಉತ್ತರ ಪಿನಾಕಿನಿ ನದಿಯನ್ನು ರಕ್ಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಕಿಂಡಿ ಅಣೆಕಟ್ಟೆಯಿಂದ ಪಟ್ಟಣದ ಗಾಂಧಿ ವೃತ್ತದ ವರೆಗೂ ಪಾದಯಾತ್ರ ನಡೆಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮೀನಾರಾಯಣ್ ಮಾತನಾಡಿ, ತಾಲೂಕಿನ ಜೀವನದಿಯಾಗಿದ್ದ ಉತ್ತರ ಪಿನಾಕಿನಿ ಇಂದು ಅಕ್ರಮ ಮರಳು ಗಣಿಗಾರಿಕೆಯಿಂದ ಬರಡಾಗಿ ಮರಭೂಮಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಅಕ್ರಮ ಮರಳು ಗಣಿಗಾರಿಕೆಯಿಂದ ನದಿಯ ಪಾತ್ರದಲ್ಲಿ ಮರಳು ಖಾಲಿಯಾಗಿ, ಗಿಡಗಂಟೆಗಳು ಬೆಳೆದು ಸುತ್ತಮುತ್ತಲಿನ ಹಾಗೂ ತಾಲೂಕಿನ ಕೊಳವೆ ಬಾವಿಗಳು ಬತ್ತಿಹೋಗಿ ಬೇಸಾಯಕ್ಕೆ ನೀರಿಲ್ಲದೆ ರೈತರ ಪರಿಸ್ಥಿತಿ ಡೋಲಾಯಮಾನವಾಗಿದೆ ಎಂದು ವಿಷಾಧಿಸಿದರು.

ಒತ್ತುವರಿ ತೆರವು:
ಉತ್ತರ ಪಿನಾಕಿನಿ ನದಿಯಲ್ಲಿ ಅಕ್ರಮವಾಗಿ ನದಿಯ ಇಕ್ಕೆಲೆಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೆ. ಅಕ್ರಮವಾಗಿ ಮನೆಗಳ ನಿರ್ಮಾಣ ಮಾಡಿಕೊಂಡಿದ್ದು, ಸರಕಾರವೇ ಸರಕಾರಿ ಶಾಲೆಯನ್ನು ನಿರ್ಮಾಣ ಮಾಡಿದೆ. ಪ್ರಕೃತಿಯ ಒಡಲು ಒತ್ತುವರಿ ಮಾಡಿಕೊಂಡು ನದಿಯನ್ನು ಮುಚ್ಚುವ ಹಂತಕ್ಕೆ ತಲುಪುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕು ಅಧ್ಯಕ್ಷ ಲೋಕೇಶ್‍ಗೌಡ ಮಾತನಾಡಿ, ತಾಲೂಕಿನ ಪ್ರತಿಯೊಬ್ಬ ರೈತರೂ ಸಹ ಉತ್ತರ ಪಿನಾಕಿನಿ ಮತ್ತು ಕುಮದ್ವತಿ ನದಿಗಳಲ್ಲಿ ಮರಳು ತೆಗೆಯುವುದನ್ನು ಸ್ವಯಂಪ್ರೇರಿತರಾಗಿ ತಡೆಯಬೇಕು ಎಂದು ತಿಳಿಸಿದರು.ಪಾದಯಾತ್ರೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸನತ್‍ಕುಮಾರ್, ಜಿ.ರಾಜಣ್ಣ, ಮುದ್ದುರಂಗಪ್ಪ, ಅಶ್ವತ್ಥಪ್ಪ, ನರಸಿಂಹರೆಡ್ಡಿ, ನಂಜುಂಡಪ್ಪ, ನಾರಾಯಣಪ್ಪ, ನಾರಾಯಣರೆಡ್ಡಿ, ನಾಗರಾಜ್ ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin