ಅಕ್ರಮ ಮೂಲಗಳಿಂದ ಲಭಿಸುವ ಉಡುಗೊರೆ ಆದಾಯವೆನಿಸುವುದಿಲ್ಲ : ಸುಪ್ರೀಂಕೋರ್ಟ್
ನವದೆಹಲಿ, ಫೆ.16-ಅಕ್ರಮ ಮೂಲಗಳಿಂದ ಲಭಿಸುವ ಉಡುಗೊರೆ ಮತ್ತು ಕೊಡುಗೆಗಳನ್ನು ಆದಾಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಷಷ್ಟವಾಗಿ ಹೇಳಿದೆ. ಈ ಮೂಲಕ ದುಬಾರಿ ಉಡುಗೊರೆಗಳನ್ನು ಬಯಸುವ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕ ಸೇವಕರಿಗೆ ಭಾರೀ ಹಿನ್ನಡೆಯಾಗಿದೆ. 66.65 ಕೋಟಿ ರೂ. ಅಕ್ರಮ ಆಸ್ತಿ ಸಂಪಾದನೆ ಹಗರಣದಲ್ಲಿ ಜೈಲುಪಾಲಾಗಿರುವ ಶಶಿಕಲಾ ನಟರಾಜನ್ ಅವರನ್ನು ತಪ್ಪಿತಸ್ಥರೆಂದು ಶಿಕ್ಷೆ ನೀಡಿದ ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಷ್ ಮತ್ತು ಅಮಿತವ್ ರಾಯ್ ಅವರನ್ನು ಒಳಗೊಂಡ ಪೀಠವು ತೀರ್ಪಿ ಒಂದು ಭಾಗದಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ.
ಇಂಥ ಉಡುಗೊರೆಗಳನ್ನು ನ್ಯಾಯಸಮ್ಮತ ಆದಾಯವೆಂದು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಮೂರ್ತಿಗಳು, ಕಾನೂನಿನಲ್ಲಿರುವ ನಿಯಮಗಳನ್ನು ಉದಾಹರಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 161 ಮತ್ತು 165ಎ ಸೆಕ್ಷನ್ಗಳ ಪ್ರಕಾರ (ಈಗ ಭ್ರಷ್ಟಾಚಾರ ತಡೆ ಕಾಯ್ದೆ) ಅಕ್ರಮ ಮತ್ತು ಕಾನೂನುಬಾಹಿರ ಆದಾಯ ಮೂಲಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ನ್ಯಾಯಸಮ್ಮತವಲ್ಲದ ಮೂಲಗಳಿಂದ ಪಡೆದ ಉಡುಗೊರೆಗಳನ್ನು ವಿಧಿಬದ್ಧ ಆದಾಯ ಮೂಲಗಳು ಎಂದು ಯಾವುದೇ ಕಾರಣಕ್ಕೂ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS