ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಗಡುವು ಒಂದು ತಿಂಗಳು ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Akrama-Sakarama

ಬೆಂಗಳೂರು, ಡಿ.23-ನಗರ ಮತ್ತು ಗ್ರಾಮೀಣ ಭಾಗದ ಅಕ್ರಮ ಮನೆಗಳ ಸಕ್ರಮೀಕರಣಕ್ಕಾಗಿ ಅರ್ಜಿ ಸಲ್ಲಿಸುವ ಗಡುವನ್ನು ಒಂದು ತಿಂಗಳು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಸಕ್ರಮೀಕರಣ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ನೀಡಲಾಗಿದ್ದ ಗಡುವು ಡಿ.20ಕ್ಕೆ ಮುಕ್ತಾಯವಾಗಿದೆ. ಅದನ್ನು ಮತ್ತೆ ಜನವರಿ 21ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಅದೇ ರೀತಿ ನಗರ ಪ್ರದೇಶಗಳ ಅಕ್ರಮ ಮನೆಗಳ ಸಕ್ರಮೀಕರಣಕ್ಕೂ ಕೂಡ ಒಂದು ತಿಂಗಳ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸಕ್ರಮೀಕರಣಕ್ಕೆ ಸಲ್ಲಿಸುವ ಅರ್ಜಿ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಲಾಗುವುದು. 8×50 ವಿಸ್ತೀರ್ಣದ ನಿವೇಶನಕ್ಕೆ ಈಗ 6 ಸಾವಿರ ಶುಲ್ಕ ಪಾವತಿಸಬೇಕು. ಅದು 3 ಸಾವಿರಕ್ಕೆ ಇಳಿಕೆ ಮಾಡಲಾಗಿದೆ ಎಂದರು. ಗ್ರಾಮ ಲೆಕ್ಕಾಧಿಕಾರಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅರ್ಜಿ ಸಲ್ಲಿಸಿರುವವರಿಂದ ಮಾಹಿತಿ ಪಡೆಯಬೇಕು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.  ನಮೂನೆ 94 ಸಿ ಅಡಿ ಅರ್ಜಿ ಸಲ್ಲಿಸದಿರುವವರಿಗೆ ಅರ್ಜಿ ಸಲ್ಲಿಸುವಂತೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 40 ಲಕ್ಷದಷ್ಟು ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಆದರೆ ಈಗ ವಿಲೇವಾರಿಯಾಗಿರುವ ಅರ್ಜಿಗಳ ಸಂಖ್ಯೆ ಶೇ.2ಕ್ಕಿಂತ ಹೆಚ್ಚಾಗಿಲ್ಲ. ನಗರ ಪ್ರದೇಶದ 30 x40 ಅಡಿ ಅಳತೆಯ ಮನೆ ಸಕ್ರಮೀಕರಣಕ್ಕೂ ತಿದ್ದುಪಡಿ ತರಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ, ಅರ್ಜಿ ಪರಿಶೀಲನೆ, ವಿಲೇವಾರಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.

ಕೇಂದ್ರ ಸರ್ಕಾರದಿಂದ ಸುಮಾರು 2 ಕೋಟಿ ರೂ. ನೆರೆ ಹಾಗೂ ಬರ ಪರಿಹಾರ ದೊರೆಯುವ ನಿರೀಕ್ಷೆ ಇದೆ. ಬರ ಪರಿಹಾರಕ್ಕೆ 4700 ಕೋಟಿ ರೂ ಹಾಗೂ ನೆರೆ ಪರಿಹಾರಕ್ಕೆ 360 ಕೋಟಿ ರೂ. ನೀಡುವಂತೆ ಮನವಿ ಮಾಡಲಾಗಿದೆ. ಬರಪರಿಹಾರಕ್ಕೆ ಸಂಬಂಧಿಸಿದಂತೆ ಮೂವರು ಸಚಿವರ ಸಮಿತಿ ರಚಿಸಲಾಗಿದೆ. ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಗೊಬ್ಬರಂತೆ ಮೇಲುಸ್ತುವಾರಿ ಅಧಿಕಾರಿಯನ್ನು ನೇಮಿಸಲಾಗಿದೆ. ಇವರು ಪ್ರತಿ ಗ್ರಾ.ಪಂ.ಗೆ ಭೇಟಿ ನೀಡಿ ಬರ ನಿರ್ವಹಣೆಯ ಅಧ್ಯಯನ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು. ಜಿಲ್ಲಾಡಳಿತ ನೀಡುವ ವರದಿ ಆಧರಿಸಿ ಅನುದಾನ ಬಿಡುಗಡೆ ಮಾಡಲಾಗುವುದು, ಕುಡಿಯುವ ನೀರಿಗೆ ಆದ್ಯತೆ ನೀಡಲಿದ್ದು, ಜಾನುವಾರುಗಳ ಮೇವಿನ ಕೊರತೆ ನೀಗಿಸಲು ಮೇವು ಬ್ಯಾಂಕ್ ಸ್ಥಾಪನೆಗೆ ಸೂಚಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 60 ಲಕ್ಷ ರೂ. ಅನುದಾನ ನೀಡಲಾಗಿದೆ. ನೇರವಾಗಿ ರೈತರ ಖಾತೆಗೆ ಪರಿಹಾರ ಧನ ಜಮಾ ಮಾಡಲಾಗುವುದು. ಕೇಂದ್ರದಿಂದ ಹಣ ಬಿಡುಗಡೆಯಾದ 15 ದಿನದಲ್ಲಿ ರೈತರ ಖಾತೆಗೆ ಹಣ ವರ್ಗಾವಣೆಯಾಗಲಿದೆ. ತಾವು ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ನೆರೆ ಹಾಗೂ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin