ಅಜ್ಞಾತ ಸ್ಥಳದಲ್ಲಿ ನಕ್ಸಲೈಟ್ ರಮೇಶ್ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Naxal

ಚಿಕ್ಕಮಗಳೂರು, ಸೆ. 13-ಬೆಂಗಳೂರಿನಲ್ಲಿ ನಿನ್ನೆ ಪೊಲೀಸರು ಸೆರೆ ಹಿಡಿದಿರುವ ನಕ್ಸಲ್ ಮುಖಂಡ ರಮೇಶ್ ಅಲಿಯಾಸ್ ಶಿವಕುಮಾರ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈತನನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದಿರುವ ಚಿಕ್ಕಮಗಳೂರು ಪೊಲೀಸರು ಬಿಗಿ ಭದ್ರತೆಯೊಂದಿಗೆ ಅಜ್ಞಾತ ಸ್ಥಳಕ್ಕೆ ಕರೆಯೊಯ್ದು ವ್ಯಾಪಕ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.  ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಪಸರಿಸಲು ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಮೂಲತ: ರಾಯಚೂರಿನವನು. ಆಂಧ್ರದ ಕ್ರಾಂತಿಕಾರಿ ನಾಯಕ ಗದ್ದರ್ನಿಂದ ಪ್ರಭಾವಕ್ಕೆ ಒಳಗಾಗಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ.

ಈತನ ಪತ್ನಿ ಪಾರ್ವತಿ 2003ರ ನವೆಂಬರ್ 17ರಂದು ಈರದಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿಯಾಗಿದ್ದಳು. ಈ ಹಿಂದೆ ರಮೇಶ್ ಆಂಧ್ರ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ತೆರಲಪಲ್ಲಿ ಜೈಲಿನಲ್ಲಿದ್ದ ಕಾರಣ ತನ್ನ ಪತ್ನಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಜೈಲಿನಿಂದ ಬಿಡುಗಡೆಯಾದ ಮೇಲೆ ಈತ ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಚಟುವಟಿಕೆಗಳಲ್ಲಿ ಕ್ರಿಯಾಶೀಲನಾದ. ಈತ ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳ ಪ್ರದೇಶಗಳಲ್ಲಿ ಯುವಕರಿಗೆ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕುಮ್ಮಕ್ಕು ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ್ 2006ರಿಂದ ಪೂರ್ಣ ಪ್ರಮಾಣದಲ್ಲಿ ತನ್ನನ್ನು ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರಭಾವಿ ಮುಖಂಡನಾಗಿ ಹೊರಹೊಮ್ಮಿದ್ದ. ಈತನ ಕಾರ್ಯಾಚರಣೆ ಪಶ್ಚಿಮಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ವ್ಯಾಪಿಸಿತ್ತು. ಈತನ ವಿರುದ್ಧ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು.   ಬೆಂಗಳೂರಿನಲ್ಲಿ ನಿನ್ನೆ ಬಂತನಾದ ರಮೇಶ್ನನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಣ್ಣಾಮಲೈ ತೀವ್ರ ವಿಚಾರಣೆಗೆ ಒಳಪಡಿಸಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಉನ್ನತ ಮೂಲಗಳು ಈ ಸಂಜೆಗೆ ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin