ಅಜ್ಞಾನದ ಕತ್ತಲನ್ನು ದೂರ ಮಾಡುವುದೇ ‘ದೀಪವಾಳಿ’

ಈ ಸುದ್ದಿಯನ್ನು ಶೇರ್ ಮಾಡಿ

Happy-Diwali

ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶದ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ. ಆದ್ದರಿಂದಲೇ `ನಹಿ ಜ್ಞಾನೇನ ಸದೃಶಂ(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ಜ್ಞಾನ ವಿನಃ ಪಶುಃ (ಜ್ಞಾನವಿಲ್ಲದವನು ಪಶು)’ ಎನ್ನಲಾಗುತ್ತದೆ. ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ.  ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿ ಹೊಂದುವಂತೆ ಒಂದು ಪುರಾಣ, ಪುಣ್ಯಕಥೆ ಬೆಸೆದು ಹಬ್ಬಕ್ಕೆ ಮೆರಗು ತಂದಿದ್ದಾರೆ. ಆದರೆ ಅದು ಕ್ರಮೇಣ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ.  ಏಕೆಂದರೆ ಮಾನವನು ಹಬ್ಬಗಳ ಅಲೌಕಿಕ ಅರ್ಥ ತೆಗೆದುಕೊಳ್ಳದೇ ಕೇವಲ ಸ್ಥೂಲ ರೂಪದಲ್ಲಿ ಆಚರಿಸುತ್ತಿರು ವುದರಿಂದ ಅಲೌಕಿಕ ಸಂತೋಷದ ಅನುಭವಾಗುತ್ತಿಲ್ಲ.

ಕಾರ್ತಿಕ ಅಮಾವಾಸ್ಯೆಗೆ ಭಾರತದ ಪ್ರತಿಯೊಂದು ಮನೆಯಲ್ಲಿ ದೀಪಗಳನ್ನು ಬೆಳಗಿಸಿ ಅಬಾಲವೃದ್ಧರೂ ಸಂತೋಷಪಡುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆ, ಗುಡಿಗುಂಡಾರಗಳನ್ನು ಶುಚಿಗೊಳಿಸಿ, ಬಣ್ಣಗಳಿಂದ ಶೃಂಗರಿಸುತ್ತಾರೆ. ದೀಪಾವಳಿ ಭಾರತೀಯರ ಒಂದು ದೊಡ್ಡ ಹಬ್ಬ. ಅವಳಿ ಎಂದರೆ ಮಾಲೆ, ಸಾಲು ಎಂದರ್ಥ. ಹಬ್ಬದ ದೃಷ್ಟಿಯಿಂದ ನೋಡಿದರೆ ದೀಪಾವಳಿ ದೀಪಗಳ ಸಾಲಿನಂತೆ ಹಬ್ಬಗಳ ಸಾಲೂ ಹೌದು. ನೀರು ತುಂಬುವ ಹಬ್ಬದಿಂದ ಆರಂಭವಾಗಿ ನರಕ ಚತುರ್ದಶಿ, ಧನತೇರಸ, ಬಲಿಪಾಡ್ಯಮಿ, ಭಾವನಬಿದಿಗೆ, ಅಕ್ಕನ ತದಿಗೆ, ಪಂಚಮಿಯವರೆಗೆ ಪ್ರತಿ ದಿನವೂ ಹಬ್ಬ. ವ್ಯಾಪಾರಸ್ಥರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆ ಪ್ರಾರಂಭ ಮಾಡುತ್ತಾರೆ. ಧನ ದೇವತೆ ಲಕ್ಷ್ಮಿಯನ್ನು ಇದೇ ಸಮಯದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ.

ದೀಪಾವಳಿ ಬೆಳಕಿನ ಹಬ್ಬವಾಗಿದ್ದು , ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ. ದೀಪದಾನ ಈ ಹಬ್ಬದಲ್ಲಿ ಮಾಡುವ ವಾಡಿಕೆ ಇದೆ.  ಸ್ಥೂಲ ದೀಪದ ಜೊತೆಗೆ ಆತ್ಮ ಜ್ಯೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣವಾಗುತ್ತದೆ. ಪ್ರತಿ ಒಂದು ಹಬ್ಬಕ್ಕೆ ತನ್ನದೇ ಆದ ಹಿನ್ನೆಲೆ ಇದ್ದು , ಆಧ್ಯಾತ್ಮಿಕ ರಹಸ್ಯ ತಿಳಿಸಿಕೊಡುವುದರ ಜೊತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಸಿಕೊಳ್ಳಬೇಕು, ಅಜ್ಞಾನದ ಕತ್ತಲೆಯಿಂದ ಸತ್ಯ ಜ್ಞಾನದ ಬೆಳಕನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ.

ದೀಪಾವಳಿಯ ಬಲಿ ರಾಜಾ ಮತ್ತು ನರಕಾಸುರನ ಎರಡು ಕಥೆಗಳು ಲಾಕ್ಷಣಿಕ ಭಾಷೆಯ ರೂಪದಲ್ಲಿ ವರ್ಣನೆ ಮಾಡಲಾಗಿದೆ. ನರಕಾಸುರ ಮಾಯೆ ಅಥವಾ ಮನೋವಿಕಾರಗಳ ರೂಪ. ಕಾಮ, ಕ್ರೋಧ, ಲೋಭ, ಮೋಹ ಹಾಗೂ ಅಹಂಕಾರಗಳು ಅಸುರಿ ಲಕ್ಷಣಗಳು ಮತ್ತು ನರಕದ ದ್ವಾರ ಆಗಿವೆ. ಈ ವಿಕಾರಗಳನ್ನು ಜಯಿಸುವುದು ಎಂದರೆ ಬಲಿ ಕೊಡುವುದು ಎಂದು ಹೇಳಲಾಗುತ್ತದೆ.  ವಿಶ್ವದ ಇತಿಹಾಸದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ಕಲಿಯುಗ. ಭಾರತ ಸತ್ಯಯುಗದಲ್ಲಿ ಸ್ವರ್ಗವಾಗಿತ್ತು. ಅಲ್ಲಿನ ಮನುಷ್ಯರೆಲ್ಲರೂ ದೇವಿ-ದೇವತೆಗಳಾಗಿದ್ದರು. ಅವರೇ ಜನ್ಮ ಮರಣದ ಚಕ್ರದಲ್ಲಿ ಬರುತ್ತಾ ಈಗ ನರಕದಲ್ಲಿ ನರಕಾಸುರ ಅಥವಾ ಬಲಿಯ ಅನರಾಗಿದ್ದಾರೆ. ಆತ್ಮಜ್ಞಾನ ಹಾಗೂ ನಿರಾಕಾರ ಶಿವನ ಧ್ಯಾನದಿಂದ ನಾವು ಪುನಃ ಬಂಧನ ಮುಕ್ತರಾಗಲು ಸಾಧ್ಯವಿದೆ.
ಆತ್ಮಜ್ಞಾನ ಎಂದರೆ ಆತ್ಮದೀಪ ಬೆಳಗಿಸುವುದು. ನಾನು ಒಂದು ಜ್ಯೋತಿ, ಜಾತಿ ಇಲ್ಲದ ಅತಿಸೂಕ್ಷ್ಮಿ ಆತ್ಮಜ್ಯೋತಿ. ಶರೀರದಹಣೆಯ ಮಧ್ಯದಲ್ಲಿ ಹೊಳೆಯುವ ಚೈತನ್ಯ ಜ್ಯೋತಿ. ದೇಹ ಎಂಬ ರಥದ ಸಾರಥಿ ನಾನು ಆತ್ಮ. ದೇಹದ ಮೂಲಕ ಈ ಸೃಷ್ಟಿ ನಾಟಕದಲ್ಲಿ ಪಾತ್ರ ಅಭಿನಯಿಸುವ ಪಾತ್ರಧಾರಿ ನಾನು. ಈ ರೀತಿ ನಿತ್ಯಚಿಂತನೆ ಮಾಡಬೇಕು. ಇದನ್ನೇ ಆತ್ಮಾನುಭೂತಿ ಎಂದು ಕರೆಯಲಾಗುತ್ತದೆ.

ದೀಪಾವಳಿಯ ದಿನ ಮನಸ್ಸಿನಲ್ಲಿ ಇರುವ ಅಮವಾಸ್ಯೆಯ ಪ್ರತೀಕವಾದ ಅಜ್ಞಾನ ಅಂಧಕಾರ ದೂರ ಮಾಡಲು ಮನದಲ್ಲಿ ಜ್ಞಾನದ ಜ್ಯೋತಿ ಬೆಳಗಿಸಬೇಕಾಗಿದೆ. ನಿರಾಕಾರನಾಗಿರುವ ಶಿವನ ಸಂಬಂಧದಿಂದ ಅಂದರೆ ರಾಜಯೋಗದಿಂದ ಅನೇಕ ಶಕ್ತಿಗಳ, ಸರ್ವಗುಣಗಳ ಪ್ರಾಪ್ತಿ ಆಗುತ್ತದೆ. ಆದ್ದರಿಂದಲೇ ಭಕ್ತರು ಭಗವಂತನ ಮುಂದೆ `ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ’ ಎಂದು ಹಾಡುತ್ತಾರೆ.  ದೀಪ ದಾನದ ಅರ್ಥವು ಜ್ಞಾನದಾನವೇ ಆಗಿದೆ. ಹಳೆ ಖಾತೆಯನ್ನು ಸಮಾಪ್ತ ಮಾಡಿ ಹೊಸ ಖಾತೆಯನ್ನು ಶುರು ಮಾಡುತ್ತಾರೆ. ಇದರ ಜೊತೆ ಜೊತೆಗೆ ಹೊಸ ಭಾವ, ಮಧುರ ನುಡಿ, ಸ್ನೇಹ, ಪ್ರೀತಿಯ ಅವಶ್ಯಕತೆ ಇದೆ. ಹಳೆ ಕರ್ಮದ ಖಾತೆ ರಾಜಯೋಗದ ತಪಸ್ಸಿನ ಬಲದಿಂದ ಸಮಾಪ್ತಿ ಮಾಡಿ ಹೊಸ ಖಾತೆಯನ್ನು ಶುರು ಮಾಡುತ್ತಾರೆ. ಇದರ ಜೊತೆ ಜೊತೆಗೆ ಹೊಸ ಭಾವ, ಮಧುರ ನುಡಿ, ಸ್ನೇಹ, ಪ್ರೀತಿಯ ಅವಶ್ಯಕತೆ ಇದೆ. ಹಳೆ ಕರ್ಮದ ಖಾತೆ ರಾಜಯೋಗದ ತಪಸ್ಸಿನ ಬಲದಿಂದ ಸಮಾಪ್ತಿ ಮಾಡಬೇಕಾಗಿದೆ. ನಿರಾಕಾರ ಪರಮಜ್ಯೋತಿ ಪರಮಾತ್ಮನು ಪುನಃ ಪವಿತ್ರತೆ, ಸುಖ ಶಾಂತಿ ಸಮೃದ್ದಿಯ `ರಾಮರಾಜ್ಯ’ ಸ್ಥಾಪನೆ ಮಾಡುತ್ತಿರುವ ಸಂಕೇತ ದೀಪಾವಳಿ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ 
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ 
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ ಎನ್ನುವ ಶರಣರ ನುಡಿಯಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದದ ಪ್ರಾಪ್ತಿ ಮಾಡಿಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ. ಹಾಗಾದರೆ ಬನ್ನಿ ನಾವು ಈ ವರ್ಷದ ದೀಪಾವಳಿಯನ್ನು ಆತ್ಮದೀಪವನ್ನು ಬೆಳಗಿಸಿ, ಈಶ್ವರಾನುಭೂತಿಯನ್ನು ಮಾಡುತ್ತಾ ಅನ್ಯರಿಗೂ ಜ್ಞಾನದೀಪವನ್ನು ದಾನ ಮಾಡಿ ಆಚರಿಸೋಣ.

► Follow us on –  Facebook / Twitter  / Google+

 

Facebook Comments

Sri Raghav

Admin