ಅಣ್ಣಾವ್ರ ಜನಮದಿನದಂದು ಅವರ ನೆನಪುಗಳ ಒಂದು ಪುಟ ನಿಮಗಾಗಿ

ಈ ಸುದ್ದಿಯನ್ನು ಶೇರ್ ಮಾಡಿ

Rajkumar--01

– ಸಿ.ವಿ.ಶಿವಶಂಕರ್, ಚಿತ್ರ ಸಾಹಿತಿ
ನಿರ್ದೇಶಕ, ನಿರ್ಮಾಪಕ

1962ನೇ ಏಪ್ರಿಲ್ 24ನೇ ತಾರೀಖು ಚೆನ್ನೈನ ( ಆಗಿನ ಮದರಾಸುನಗರ) ಮೈಲಾಪುರದ ವೈಎಂಸಿಎ ಸಭಾಂಗಣದಲ್ಲಿ (ನಾನು ಪ್ರತಿ ತಿಂಗಳಿಗೆ ಎರಡೆರಡು ಕನ್ನಡ ನಾಟಗಳನ್ನು ಪ್ರದರ್ಶಿಸುತ್ತಿದ್ದೆ) ಆರೋಗ್ಯ ಪಿಶಾಚಿ ಎಂಬ ನಾಟಕ ಪ್ರದರ್ಶನ ನಡೆದಿತ್ತು. ಸಿರಿಗನ್ನಡ ಸಾಹಿತ್ಯ ನಾಟಕ ಮಂಡಳಿ ಎಂಬ ಹೆಸರಿನಲ್ಲಿ ನಾನು ಮದ್ರಾಸಿನಲ್ಲಿ ಹಾಸ್ಯ ನಾಟಕ ಪ್ರದರ್ಶನ ಮಾಡುತ್ತಿದ್ದೆ. ದಕ್ಷಿಣ ಕನ್ನಡದ ಉಡುಪಿ ಹೋಟೆಲುಗಳ ಕೆಲಸಗಾರರು. ನಮ್ಮ ಕನ್ನಡ ಚಿತ್ರರಂಗದ ನಟ-ನಟಿಯರೇ ನಮಗೆ ಪ್ರೇಕ್ಷಕರಾಗಿ ಸಭಾಂಗಣ ಭರ್ತಿಯಾಗಿತ್ತು. ನಮ್ಮ ನಾಟಕದಲ್ಲಿ ಅಭಿನಯಿಸುವ ಚಿತ್ರನಟರೂ, ಕಲಾವಿದರೂ ಪ್ರೇಕ್ಷಕರಾಗಿ ಕುಳಿತು ನಾಟಕ ನೋಡುತ್ತಿದ್ದರು. ಇದೊಂದು ಹಬ್ಬದ ಸನ್ನಿವೇಶವಾಗಿತ್ತು. ಸ್ಟೇಜ್ ಮೇಲೆ ನಾವೊಂದು ಸಂಭಾಷಣೆ ಹೇಳಿದಾಗ, ಮುಂದೆ ಕುಳಿತಿದ್ದ ರಾಜಕುಮಾರ್‍ರವರಾದಿ ಯಾಗಿ ಕೆಲ ಕಲಾವಿದರು ಅವರು ಕುಳಿತಲ್ಲಿಂ ದಲ್ಲೇ ಅದನ್ನು ಕೇಳಲು ಸಿದ್ಧರಾಗುತ್ತಿದ್ದರು.

ರತ್ನಾಕರ ನಾನು (ಸಿ.ವಿ.ಶಿವಶಂಕರ್) ಒಂದು ಹಾಸ್ಯ ದೃಶ್ಯದಲ್ಲಿ ಮಾತನಾಡುತ್ತಿರು ವಾಗ ಕುಂಬಳಕಾಯಿ ತಗೊಂಡು ಬಾರೋ ಮಜ್ಜಿಗೆ ಹುಳಿ ಮಾಡಬೇಕು ಎಂಬ ಸಂಭಾಷಣೆಗಳ ಕೇಳಿ, ಯಜಮಾನ್ರೆ ಕುಂಬಳಕಾಯಿಗೆ ಕಾಸು ಕೊಡಿ ಎಂದ. ಮುಂದೆ ನಾಟಕ ನೋಡುತ್ತಾ ಕುಳಿತಿದ್ದ ರಾಜಕುಮಾರವರು ಕುಂಬಳಕಾಯಿಗೆ ದುಡ್ಡೇಕೆ ಕೊಡಬೇಕು. ನಿನ್ನೆ ಆಯುಧ ಪೂಜೆ ದಿನ ಮುಗಿದಿದೆ. ಅಂಗಡಿಯವರು ಕುಂಬಳಕಾಯಿಯನ್ನು ನಿವಾಳಿಸಿ ಒಡೆದಿರುತ್ತಾರೆ. ಅದನ್ನು ಹೋಗಿ ತೆಗೊಂಡು ಬಾ ಎಂದರು. ಪಾತ್ರಧಾರಿ ರತ್ನಾಕರ ಸ್ಟೇಜ್ ಮೇಲಿನಿಂದ ಅಂದರಲ್ಲಿ ಕುಂಕುಮ ತುಂಬಿ ಅಂಗಡಿಗೆ ದೃಷ್ಟಿ ತೆಗೆದು ಒಡೆದಿರ್ತಾರೆ. ಅದನ್ನು ತರಬಾರದು ಅಂತ ಕೂಗಿದ. ರಾಜಕುಮಾರ್‍ರವರು ನಗುತ್ತಾ ಕುಂಕುಮ ತೊಳೆದು ಮಜ್ಜಿಗೆ ಹುಳಿ ಮಾಡಬಹದು. ದೃಷ್ಟಿ ತೆಗೆದ್ರು ಅದರ ದೋಷ ನಿಮಗಾಗಲ್ಲ ಅಂತ ನಗುತ್ತಾ ಹೇಳಿದರು.

ಪಕ್ಕದಲ್ಲೇ ಕುಳಿತಿದ್ದ ನರಸಿಂಹರಾಜು, ರಾಜಕುಮಾರ್‍ರವರೇ ಹೇಳಿದ ಮೇಲಾಯ್ತು ದೋಷ ಇಲ್ಲ. ಸ್ವಲ್ಪ ಉಪ್ಪು ಜಾಸ್ತಿ ಹಾಕಿದ್ರಾಯ್ತು ಅಂತ ಅವರು ಕುಳಿತ ಜಾಗದಿಂದಲೇ ಕೂಗಿದ್ರು, ಸ್ಟಂಟ್ ಮಾಸ್ಟರ್ ಶಿವಯ್ಯ ಇವತ್ತು ರಾಜಕುಮಾರವರ ಹುಟ್ಟಿದಹಬ್ಬ. ಖಾರ ಅಡಿಗೆ ಬೇಡ ಏನಾದ್ರು ಸ್ವೀಟ್ ಮಾಡಿಸಿ ಅಂತ ಹೇಳಿದ. ನಾನು ನಾಟಕದ ಮುಖ್ಯಪಾತ್ರಧಾರಿ ( ಜಿಪುಣ ಜುಬ್ರದಯ್ಯನ ಪಾತ್ರಧಾರಿ) ಸ್ವೀಟೂ ಮಾಡಿದ್ದೀವಿ ದಯವಿಟ್ಟು ರಾಜ್‍ಕುಮಾರ್ ಅವರು ಸ್ಟೇಜ್ ಮೇಲೆ ಬಂದು ಹುಟ್ಟಿದ ಹಬ್ಬದ ನೆನಪಾಗಿ ಒಂದು ರಂಗಗೀತೆ ಹಾಡಬೇಕೂಂತ ಪ್ರಾರ್ಥನೆ ಎಂದು ಹೇಳಿದೆ. ರಾಜ್ ಅವರು ಕುಳಿತ ಜಾಗದಿಂದಲೇ ಕುಂಬಳಕಾಯಿ ತರೋಕೆ ಕಾಸಿಲ್ಲ ಅಂತಿದ್ರಿ ಈಗ ಸ್ವೀಟ್ ಎಲ್ಲಿಂದ ತರ್ತೀರಿ ಅಂದಾಗ ಸ್ಟಂಟ್ ಮಾಸ್ಟ್ ಶಿವಯ್ಯ ಪ್ರೊಡಕ್ಷನ್ ಮ್ಯಾನೇಜರ್ ಶಿವಾಜಿ ಇಬ್ಬರೂ ಸ್ಟೇಜ್ ಹತ್ತಿ ಬಂದು ಜೋರಾಗಿ ರಾಜ್‍ಕುಮಾರ್ ಅವರಿಗೆ ಹುಟುಹಬ್ಬದ ಶುಭಾಶಯ ಎಂದು ಕೂಗಿದ್ರು. ಕೆಲವರು ಇಂಗ್ಲೀಷ್‍ನಲ್ಲಿ ಹ್ಯಾಪಿ ಬರ್ತಡೇ ಟು ರಾಜ್‍ಕುಮಾರ್ ಅಂತ ಕೂಗಿದ್ರು.

ನಾಟಕದ ಸ್ಟೇಜ್ ಮೇಲೆ ಎಲ್ಲಾ ಪಾತ್ರಧಾರಿಗಳ ಜೊತೆ ನಿಂತು ರಾಜ್‍ರವರು ಸುಬ್ಬಯ್ಯ ನಾಯ್ಡುರವರ ಭಕ್ತ ಅಂಬರೀಷ ನಾಟಕದ ಒಂದು ಹಾಡನ್ನು ಹೇಳಿ ಎಲ್ಲರನ್ನೂ ರಂಜಿಸಿದರು. ನಟ ಕುಪ್ಪುರಾಜ್ ರಾಜಕುಮಾರ್‍ವರಂತಹ ನಿಗರ್ವಿ ಸ್ನೇಹಮಯಿ. ನಟರಿಗೆ ಅವರ ಹುಟ್ಟುಹಬ್ಬದ ಶುಭವನ್ನು (ಸ್ಟೇಜ್ ಮೇಲೆ) ಕೋರುತ್ತಿದ್ದೇವೆ. ನಾವೆಲ್ಲ ಕನ್ನಡ ಕಲಾವಿದರು. ಏಪ್ರಿಲ್ 24ನೇ ತಾರೀಖನ್ನು ಎಂದೂ ಮರೆಯವುದಿಲ್ಲ ಎಂದು ಭಾಷಣ ಮಾಡಿದರು. ರಾಜ್‍ಕುಮಾರವರ ಕೊರಳಿಗೆ ಒಂದು ಮಲ್ಲಿಗೆ ಹೂವಿನ ಹಾರವನ್ನು ಹಾಕುತ್ತಾ ನಾನು ಇವರಿಗೆ ಪೆಪ್ಪರ್‍ಮಿಂಟ್ ಕೊಡ್ತಾ ಇದ್ದೀನಿ. ಬಡ ಕಲಾವಿದ ನನ್ನ ನಾಟಕಕ್ಕೆ ನೀವೆಲ್ಲ ಬಂದು ಪ್ರತಿ ತಿಂಗಳು ನನ್ನನ್ನು ಪ್ರೊತ್ಸಾಹಿಸುತ್ತಿದ್ದೀರಿ ಎಂದಾಗ, ಶಿವಾಜಿರಾವ್ ಎಂಬ ಪ್ರೊಡಕ್ಷನ್ ಮ್ಯಾನೇಜರ್ ಪಕ್ಕದ ಅಂಜಕಾ ಹೋಟೆಲಿ ನಿಂದ ಪಾಯಸ ಮಾಡಿಸಿ ತರಿಸಿದರು. ರಾಜಕುಮಾರ್‍ರವರೊಂದಿಗೆ ಎಲ್ಲರೂ ಸೇವಿಸಿದರು.

ರಾಜ್‍ರವರ ಕಣ್ಣಿನಲ್ಲಿ ಆನಂದ ಭಾಷ್ಯಗಳುದುರಿತು. ಇದಕ್ಕಿಂತ ಭವ್ಯವಾದ ಸಂಭ್ರಮ ಯಾವುದಿದೆ. ಒಳ್ಳೇ ನಾಟಕ ಅಭಿನಯಿಸಿ ನಮ್ಮನ್ನೆಲ್ಲ ನಗಿಸಿದ್ದೀರಿ. ನಿಮ್ಮೆಲ್ಲರ ಅಭಿಮಾನದ ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ಹೇಳಿ ನಾಗೇಂದ್ರ ರಾಯರನ್ನು ಸ್ಟೇಜ್ ಮೇಲೆ ಕರೆದು ಅವರಿಗೂ ಎಚ್.ಆರ್.ಶಾಸ್ತ್ರಿಗಳಿಗೂ ನಮಸ್ಕರಿಸಿದರು. ಶಿವಶಂಕರ್ ನಮ್ಮ ಸುಬ್ಬಯ್ಯ ನಾಯ್ಡು ಕಂಪೆನಿಯ ನಟ. ಇಲ್ಲಿಯೂ ನಮ್ಮೊಂದಿಗೆ ಇರುತ್ತೀರಿ. ತಿಂಗಳಿಗೆ ಎರಡೆರಡು ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ನಾವೆಲ್ಲ ಸುಮ್ಮನೆ ನೋಡಿ ಹೋಗುವುದಲ್ಲ. ಟಿಕೆಟ್ ತಗೊಂಡು ನಾಟಕ ನೋಡಿದ್ರೆ ಅವನಿಗೂ ಸಂತೋಷವಾಗುತ್ತದೆ ಎಂದರು.

ಅಂಥಾ ಕಲಾತಪಸ್ವಿ ಗಾನಗಂಧರ್ವ, ನಟಸಾರ್ವಭೌಮ ಎಷ್ಟೇ ಎತ್ತರಕ್ಕೆ ಬೆಳೆದರೂ ಅವರು ರಾಜ್‍ಕುಮಾರ್ ಆಗಲೇ ಇಲ್ಲ. ಮುತ್ತುರಾಜ್ ಆಗಿ ನಾಟಕ ಕಂಪೆನಿಯ ಅಭಿಜಾತ ಕಾಲವಿದನೇ ಆಗಿ ಕನ್ನಡಾಂಬೆಯ ವರಪುತ್ರರಾಗಿ ನಮ್ಮೊಂದಿಗೆ ಒಂದೇ ಮನೆಯ ಸದಸ್ಯರಂತಿರುವುದು ನಮ್ಮ ಭಾಗ್ಯ ಎಂದು ಹಿರಿಯ ನಟ ಕೆ.ಎಸ್.ಅಶ್ವಥ್ ವಂದನಾರ್ಪಣೆ ಮಾಡಿದರು. ರಾಜ್‍ರವರು ಎಲ್ಲ ನಟರೊಂದಿಗೆ ನಿಂತು ಗ್ರೂಪ್ ಫೆÇೀಟೋ ತೆಗೆಸಿಕೊಂಡರು. ಅವರ ಹುಟ್ಟುಹಬ್ಬದ ಸಮಾರಂಭ ಮದ್ರಾಸಿನ ಸಿರಿಗನ್ನಡ ನಾಟಕ ಸಂಘದ ರಂಗ ಮಂಚದ ಮೇಲೆ ನಡೆದದ್ದು ಒಂದು ಅಪೂರ್ವ ಸಮಾರಂಭವಾಗಿತ್ತು. ಸ್ಟೇಜ್ ಬಿಟ್ಟು ಅವರು ಇಳಿಯುವಾಗ ನನ್ನ ಬೆನ್ನು ಚಪ್ಪರಿಸಿ, ಆರೋಗ್ಯವಾಗಿರಿ ಎಂದೇ ನನ್ನ ಹಾರೈಕೆ ಎಂದರು. ಶಿವಶಂಕರ ಆ ಕುರ್ಚಿ ಮೇಲೆ ಕೂತುಕೊಳ್ಳಿ ಅಭಿನಯ ಇದೆಯಲ್ಲ ಶಿರಡಿಯ ಸಾಯಿಬಾಬಾ ಕೂರ ಹಾಗೇ ಕಾಣುತ್ತೆ ಎಂದರು.

ನಾನು ಅಯ್ಯೋ ಅಯ್ಯೋ ಸಾಯಿಬಾಬಾ ರವರು ಪವಾಡ ಪುರುಷರು. ನಾನು ಆರೋಗ್ಯ ಪಿಶಾಚಿ ಎಂದು ನಕ್ಕುಬಿಟ್ಟೆ. ನಮ್ಮ ಸಂಸ್ಥೆಯ ಅಧ್ಯಕ್ಷರಾದ ಹನುಮಂತರಾಯರು ನೀವೆಲ್ಲ ಮುಂದಿನ ನಾಟಕಕ್ಕೂ ತಪ್ಪದೆ ಬರಬೇಕು. ಮುಂದಿನ ನಾಟಕ `ಲಗ್ನ ಬ್ಯಾಡ್ವೇನೆ’ ಹಾಸ್ಯ ನಾಟಕ ಎಂದು ವಂದನಾರ್ಪಣೆ ಮಾಡಿದರು.

Facebook Comments

Sri Raghav

Admin