ಅತಿಲೋಕ ಸುಂದರಿ ಇನ್ನು ನೆನಪು ಮಾತ್ರ

ಈ ಸುದ್ದಿಯನ್ನು ಶೇರ್ ಮಾಡಿ

Sridevi--01

ಮುಂಬೈ, ಫೆ.28-ದುಬೈನ ಪಂಚಾತಾರ ಹೊಟೇಲ್‍ನಲ್ಲಿ ಆಕಸ್ಮಿಕವಾಗಿ ಬಾತ್ ಟಪ್‍ಗೆ ಬಿದ್ದು ದುರಂತ ಸಾವಿಗೀಡಾದ ಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಪಾರ್ಥಿವ ಶರೀರಕ್ಕೆ ಅಸಂಖ್ಯಾತ ಅಭಿಮಾನಿಗಳು, ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಮುಖಂಡರು ಕೆನ್ನೀರು ಸುರಿಸಿ ಬೀಳ್ಕೊಟ್ಟಿದ್ದಾರೆ. ಇಡೀ ಮುಂಬೈ ನಗರ ಇಂದು ಶೋಕ ಸಾಗರದಲ್ಲಿ ಮುಳುಗಿತ್ತು.  ನಿನ್ನೆ ರಾತ್ರಿ ದುಬೈನಿಂದ ವಿಶೇಷ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಲೋಖಂಡ್‍ವಾಲಾದಲ್ಲಿರುವ ಅನಿಲ್ ಕಪೂರ್ ಅವರ ನಿವಾಸದಲ್ಲಿ ಇಡಲಾಗಿತ್ತು. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಭಾರತೀಯ ಸಿನಿರಂಗದ ಗಣ್ಯರು ಶ್ರೀದೇವಿ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

ಅಮಿತಾಭ್ ಬಚ್ಚನ್, ಹೇಮಾಮಾಲಿನಿ, ಜಯಪ್ರದಾ ಸೇರಿದಂತೆ ಚಿತ್ರರಂಗದ ಅನೇಕ ಖ್ಯಾತನಾಮರು, ಕರಣ್‍ಜೋಹರ್ ಸೇರಿದಂತೆ ಹಲವಾರು ನಿರ್ದೇಶಕರು, ನಿರ್ಮಾಪಕರು, ನಟ-ನಟಿಯರು, ತಂತ್ರಜ್ಞರು ಅಂತಿಮ ನಮನ ಸಲ್ಲಿಸಿದರು.  ಬೆಳಗ್ಗೆ 9.30ಕ್ಕೆ ಶ್ರೀದೇವಿ ಅವರ ಕಳೇಬರವನ್ನು ಮುಂಬೈನ ಸೆಲೆಬ್ರೇಷನ್ ಕ್ಲಬ್‍ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಸಹಸ್ರಾರು ಅಭಿಮಾನಿಗಳು ಮತ್ತು ನಾಗರಿಕರು ಉದ್ದನೆಯ ಸರದಿ ಸಾಲಿನಲ್ಲಿ ನಿಂತು ಅಭಿನೇತ್ರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮಧ್ಯಾಹ್ನ 12.30ರವರೆಗೆ ಸಾರ್ವಜನಿಕ ದರ್ಶನದ ನಂತರ ಕ್ಲಬ್‍ನಿಂದ ಪವನ್‍ಹನ್ಸ್ ಬಳಿ ಇರುವ ವಿಲೆ ಪಾರ್ಲೆ ಚಿತಾಗಾರದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ದುಃಖತಪ್ತರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಭದ್ರತೆಗಾಗಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀದೇವಿ ಅಂತ್ಯಕ್ರಿಯೆ ನಡೆಯಿತು . ಪುರುಷ ಮೆಗಾಸ್ಟಾರ್‍ಗಳಿದ್ದ ಕಾಲದಲ್ಲಿ ಪ್ರಥಮ ಮಹಿಳೆ ಸೂಪರ್‍ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶ್ರೀದೇವಿ ದುಬೈನ ಜಮರಾಹ್ ಎಮಿರೆಟ್ಸ್ ಟವರ್ ಹೊಟೇಲ್‍ನ ಬಾತ್‍ಟಬ್‍ನಲ್ಲಿ ಬಿದ್ದು ಸಾವಿಗೀಡಾಗಿದ್ದರು. ಸೋದರ ಸಂಬಂಧಿ ವಿವಾಹಕ್ಕೆ ಪತಿ ಬೋನಿಕಪೂರ್ ಮತ್ತು ಮಗಳೊಂದಿಗೆ ತೆರಳಿದ್ದ ಶ್ರೀದೇವಿ ಸಾವಿಗೆ ಮುನ್ನಾ ದಿನ ಮದುವೆ ಸಮಾರಂಭದಲ್ಲಿ ನಟ ಅನಿಲ್ ಕಪೂರ್ ಜೊತೆ ಖುಷಿಯಿಂದ ನೃತ್ಯ ಮಾಡಿದ್ದರು. ಇನ್ನು ಮುಂದೆ ಶ್ರೀದೇವಿ ನೆನಪು ಮಾತ್ರ.

Facebook Comments

Sri Raghav

Admin