ಅತಿ ಭಾರ ಹೊತ್ತ ಟಿಪ್ಪರ್ ಲಾರಿಗಳಿಗೆ ತಡೆ

ಈ ಸುದ್ದಿಯನ್ನು ಶೇರ್ ಮಾಡಿ

BELURU-5

ಬೇಲೂರು, ಆ.8- ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಅತಿಯಾದ ಭಾರ ಹೊತ್ತ ಟಿಪ್ಪರ್ ಲಾರಿಗಳು ಚಲಿಸುತ್ತಿರುವುದರಿಂದ ರಸ್ತೆಗಳೆಲ್ಲ ಸಂಪೂರ್ಣವಾಗಿ ಗುಂಡಿಬಿದ್ದಿರುವುದರಿಂದ ಅರೇಹಳ್ಳಿಯ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಶನಿವಾರ ಸಂಜೆಯಿಂದಲೇ ಕಾರ್ಯಾಚರಣೆಗಿಳಿದು ಟಿಪ್ಪರ್ ಲಾರಿಗಳನ್ನು ತಡೆದು ಆರ್‍ಟಿಓ ಅಧಿಕಾರಿಗಳ ವಶಕ್ಕೆ ನೀಡಿದ ಘಟನೆ ನಡೆದಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿಮೂರ್ಲನಾ ಸಮಿತಿ ಅಧ್ಯಕ್ಷ ಮುಸ್ತಫಾ, 20 ಟನ್ ಸಾಮಾಥ್ರ್ಯದ ಭಾರ ಹೊರುವ ರಸ್ತೆ ಮೇಲೆ 45 ಟನ್ ಭಾರ ಹೊತ್ತ ಟಿಪ್ಪರ್‍ಗಳು ದಿನನಿತ್ಯ ಚಲಿಸುತ್ತಿರುವುದರಿಂದ ರಸ್ತೆಗಳೆಲ್ಲ ಗುಂಡಿಬಿದ್ದು ಓಡಾಡಲು ಕಷ್ಟವಾಗಿದೆ. ಕಳೆದ ಐದಾರು ತಿಂಗಳಿಂದ ಈ ಭಾಗದ ರಸ್ತೆಯಲ್ಲಿಯೆ ಅತಿಹೆಚ್ಚು ಭಾರ ಹೊತ್ತ ಟಿಪ್ಪರ್ ಲಾರಿಗಳು ಓಡಾಡುತ್ತಿವೆ ಎಂದರು.
ಸಾರಿಗೆ ಪ್ರಾಧಿಕಾರದ ನಿಯಮದಂತೆ ಅತಿ ಭಾರದ ಟಿಪ್ಪರ್‍ಲಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಚಲಿಸಬೇಕು. ಆದರೆ ನಿಯಮವನ್ನು ಉಲ್ಲಂಘಿಸಿ ಜಿಲ್ಲಾ ಹೆದ್ದಾರಿ ರಸ್ತೆಯಲ್ಲಿ ರಾಜಾ ರೋಷವಾಗಿ ಈ ಟಿಪ್ಪರ್ ಲಾರಿಗಳು ಚಲಿಸುತ್ತಿವೆ. ಈ ಬಗ್ಗೆ ಒಂದೆರಡು ಬಾರಿ ಟಿಪ್ಪರ್ ಲಾರಿಗಳ ಮಾಲೀಕರಿಗೆ ಮನವಿ ಮಾಡಿದ್ದರೂ ಅವರು ಖ್ಯಾರೆ ಎನ್ನುತ್ತಿಲ್ಲ.

ಬೇರೆ ದಾರಿ ಕಾಣದೆ ಟಿಪ್ಪರ್ ಲಾರಿಗಳನ್ನು ತಡೆ ಹಿಡಿದಿರುವುದಾಗಿ ಹೇಳಿದ ಅವರು, ಮಧ್ಯರಾತ್ರಿ ಅತಿಭಾರದ ಟಿಪ್ಪರ್‍ಗಳು ಓಡಾಡುತ್ತಿರುವುದು ಪೊಲೀಸ್ ಇಲಾಖೆಯನ್ನು ಅನುಮಾನದಿಂದ ನೋಡುವಂತಾಗಿದೆ. ನಮ್ಮ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಅತಿಭಾರದ ಟಿಪ್ಪರ್ ಲಾರಿಗಳ ಓಡಾಟದಿಂದ ರಸ್ತೆಗಳೆಲ್ಲ ಗುಂಡಿಬಿದ್ದು ಕೆಸರು ಮಯವಾಗಿದೆ. ಅತಿ ಭಾರದ 10 ಚಕ್ರದ ಲಾರಿಗಳು 45 ಟನ್‍ಗಿಂತಲೂ ಹೆಚ್ಚು ಭಾರದ ಜಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದುದರಿಂದ ಲಾರಿಗಳನ್ನು ತಡೆದು ಆರ್‍ಟಿಓ ಅಧಿಕಾರಿಗಳ ವಶಕ್ಕೆ ನೀಡುತ್ತಿರುವುದಾಗಿ ತಿಳಿಸಿದರು.
ಸಕಲೇಶಪುರ ಆರ್‍ಟಿಓ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ, ಅತಿ ಭಾರದ ಟಿಪ್ಪರಗಳು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಚಲಿಸದೆ ಈ ಭಾಗದ ರಸ್ತೆಯಲ್ಲಿ ಓಡಾಡುತ್ತಿರುವುದು ತಪ್ಪಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಗ್ರಾಪಂ ಅಧ್ಯಕ್ಷೆ ಉಸ್ಮಾ, ಸದಸ್ಯ ವಿಘ್ನೇಶ್, ಕೆ.ಪಿ ಮೋಹನ್, ಮಹಮದ್, ಅಪ್ಸರ್, ಕಾರ್ಮಿಕ ಸಂಘಟನೆ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ನಾಗರೀಕ ವೇದಿಕೆ ಕಾರ್ಯಕರ್ತರು ಬಿಜೆಪಿ ಮುಖಂಡ ಸಂತೋಷ್, ಹರೀಶ್‍ಶೆಟ್ಟಿ, ಪಿಎಸಿಸಿ ಅಧ್ಯಕ್ಷ ಶಶಿಕುಮಾರ್ ಇನ್ನತರರಿದ್ದರು.

Facebook Comments

Sri Raghav

Admin

Leave a Comments