ಅತ್ತೆ-ಮಾವನನ್ನು ಕೊಂದು ಪರಾರಿಯಾಗಿದ್ದ ಅಳಿಯನ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Murder--01

ಬೆಂಗಳೂರು, ಮಾ.4-ಅತ್ತೆ-ಮಾವನ ಕೊಂದು ಪತ್ನಿ ಮತ್ತು ನೆರೆ ಮನೆಯವರನ್ನು ಗಾಯಗೊಳಿಸಿ ಪರಾರಿಯಾಗಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಮಿಳುನಾಡು ತಿರುಪತ್ತೂರಿನ ಬಟ್ಟೆ ವ್ಯಾಪಾರಿ ಸೆಂದಿಲ್ (34) ಬಂಧಿತ ಆರೋಪಿ.  ನಗರದ ಮಾದಾವರ ಬಳಿ ಆರೋಪಿ ಸೆಂದಿಲ್ ಸಂಬಂಧಿಕರ ಮನೆಗೆ ಹೋಗುತ್ತಿದ್ದಾನೆಂಬ ಮಾಹಿತಿ ಪಡೆದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.  ಘಟನೆ ವೇಳೆ ಗಾಯಗೊಂಡಿರುವ ಸೆಂದಿಲ್ ಪತ್ನಿ ಸತ್ಯವತಿ ಹಾಗೂ ನೆರೆ ಮನೆಯವರು ಚೇತರಿಸಿಕೊಳ್ಳುತ್ತಿದ್ದಾರೆ.   ಅಳಿಯನಿಂದಲೇ ಹತ್ಯೆಯಾದ ಅತ್ತೆ-ಮಾವನ ಶವವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಘಟನೆ ವಿವರ:

ಬೆಂಗಳೂರಿನ ಹರಿನಗರದ ನಿವಾಸಿ ಸತ್ಯವತಿಯನ್ನು ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸೆಂದಿಲ್ , ತದನಂತರ ಕೌಟುಂಬಿಕ ವಿಚಾರವಾಗಿ ಆಗಾಗ್ಗೆ ಪತ್ನಿಗೆ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ. ಇದರಿಂದ ಕೋಪಗೊಂಡು ಸತ್ಯವತಿ ತನ್ನ ತವರು ಮನೆಗೆ ಬಂದು ನೆಲೆಸಿದ್ದಳು. ನಿನ್ನೆ ಪತ್ನಿಯನ್ನು ಕರೆದೊಯ್ಯಲು ಹರಿನಗರಕ್ಕೆ ಬಂದಿದ್ದಾಗ ಈತನ ಅತ್ತೆ ಮುರುಗಮ್ಮ, ಮಾವ ಕುಮಾರ್ ಒಪ್ಪಿರಲಿಲ್ಲ. ಈ ವೇಳೆ ಇವರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿ, ವಿಕೋಪಕ್ಕೆ ತಿರುಗಿದಾಗ ಚೂರಿಯಿಂದ ಅತ್ತೆ-ಮಾವನಿಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.

ಘಟನೆ ವೇಳೆ ಮಧ್ಯಪ್ರವೇಶಿಸಿದ್ದ ಈತನ ಪತ್ನಿ ಹಾಗೂ ನೆರೆಮನೆಯವರ ಮೇಲೂ ಹಲ್ಲೆ ನಡೆಸಿದ್ದನು. ಸ್ಥಳೀಯರು ಬಂದು ನೋಡುವಷ್ಟರಲ್ಲಿ ಕುಮಾರ್-ಮುರುಗಮ್ಮ ದಂಪತಿ ಕೊನೆಯುಸಿರೆಳೆದಿದ್ದರು.   ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೋಣನಕುಂಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ತನಿಖೆ ಕೈಗೊಂಡು ಮಿಂಚಿನ ಕಾರ್ಯಾಚರಣೆ ನಡೆಸಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin