‘ಅಧಿಕಾರಯುಕ್ತ ಸಮಿತಿ ಮೂಲಕ ಬಿಬಿಎಂಪಿ ಸೂಪರ್ ಸೀಡ್ ಗೆ ಹುನ್ನಾರ’

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar

ಬೆಂಗಳೂರು, ಮಾ.10-ಸ್ಥಾಯಿ ಸಮಿತಿ ಆಯುಕ್ತರು ಹಾಗೂ ಪಾಲಿಕೆ ಸಭೆಯ ಎಲ್ಲಾ ಸ್ವಾಯತ್ತ ಅಧಿಕಾರವನ್ನು ಕಸಿದುಕೊಂಡು ಅಧಿಕಾರಯುಕ್ತ ಸಮಿತಿ ರಚಿಸಿರುವ ಸರ್ಕಾರ ಈ ಮೂಲಕ ಬಿಬಿಎಂಪಿಯನ್ನು ಪರೋಕ್ಷವಾಗಿ ಸೂಪರ್‍ಸೀಡ್ ಮಾಡಲು ಹೊರಟಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಬಿಎಂಪಿಗೆ ನಗರೋತ್ಥಾನ ಅನುದಾನದ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ, ಟೆಂಡರ್ ಅನುಮೋದನೆ ನೀಡುವ ಎಲ್ಲಾ ಅಧಿಕಾರವನ್ನು ಅಧಿಕಾರಯುಕ್ತ ಸಮಿತಿಗೆ ವಹಿಸಿ ಕೆಎಂಸಿ ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ವರ್ತಿಸಿದೆ. ಗುತ್ತಿಗೆದಾರರಿಂದ ಹಣ ಪಡೆಯುವ ಉದ್ದೇಶದಿಂದ ಮತ್ತು ಚುನಾವಣೆಗೆ ನಿಧಿ ಸಂಗ್ರಹಕ್ಕಾಗಿ ಈ ವಾಮಮಾರ್ಗವನ್ನು ಅನುಸರಿಸಿದೆ ಎಂದು ಗಂಭೀರ ಆರೋಪ ಮಾಡಿದರು.

ನಗರೋತ್ಥಾನ ಅನುದಾನದ 7300 ಕೋಟಿ ರೂ. ಯೋಜನಾ ಕಾಮಗಾರಿಗಳನ್ನು ಅಧಿಕಾರಯುಕ್ತ ಸಮಿತಿ ನಿರ್ವಹಿಸುತ್ತಿದೆ. ಬರೋಬ್ಬರಿ ಇದರಲ್ಲಿ ಒಂದು ಕೋಟಿ ರೂ.ಗಳಷ್ಟು ಕಿಕ್‍ಬ್ಯಾಕ್ ಪಡೆಯಲಾಗಿದೆ. ಚುನಾವಣೆಗೆ ಹಣ ಹೊಂದಿಸುವ ಮತ್ತು ಲಪಟಾಯಿಸುವ ಇದರ ಹಿಂದೆ ಇದೆ. ಸರ್ಕಾರದ ಖಜಾನೆ ಖಾಲಿಯಿದ್ದರೂ 7,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಸರ್ಕಾರ ದಾಖಲೆ ಅನುದಾನ ಕೊಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಕಾಮಗಾರಿಗಳ ಟೆಂಡರ್ ನೀಡಿ ಕಮೀಷನ್ ಪಡೆದಿದ್ದಾರೆ. ಬಿಡುಗಡೆ ಮಾಡಿರುವ ಅನುದಾನ ಕೇವಲ 1500 ಕೋಟಿ ರೂ. ಮಾತ್ರ. ಗುತ್ತಿಗೆದಾರರಿಗೆ 5,800 ಕೋಟಿ ರೂ. ನೀಡಬೇಕಿದೆ. ಚುನಾವಣೆ ಮುಗಿಯುವವರೆಗೆ ಇವರಿಗೆ ಹಣ ನೀಡಲಾಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಲಾಗುತ್ತಿದೆ. ತಮ್ಮ ಬಾಕಿ ಹಣಕ್ಕಾಗಿ ಇವರು ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದರು.

ಟೆಂಡರ್‍ಶ್ಯೂರ್, ವೈಟ್‍ಟಾಪಿಂಗ್, ರಾಜಕಾಲುವೆಗಳ ಪುನಶ್ಚೇತನ ಮತ್ತು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಮೊತ್ತ 2,455 ಕೋಟಿ ರೂ.ಗಳಿಗೆ 894 ಕೋಟಿ ರೂ.ಗಳನ್ನು ಅಧಿಕವಾಗಿ ನಮೂದಿಸಲಾಗಿದೆ. ಇದರಲ್ಲಿ ಸುಮಾರು 500 ಕೋಟಿ ರೂ.ನಷ್ಟು ಕಿಕ್‍ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿದರು. 7,300 ಕೋಟಿ ರೂ. ಯೋಜನೆ ಕಾಮಗಾರಿಗಳಲ್ಲಿ ಒಂದು ಸಾವಿರ ಕೋಟಿ ಕಮೀಷನ್ ಪಡೆದಿದ್ದಾರೆ ಎಂದು ಆರೋಪಿಸಿರುವ ಅವರು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರಜೈನ್ ಅವರುಗಳ ವಿರುದ್ಧ ಎಸಿಬಿ, ಬಿಎಂಟಿಎಫ್, ಲೋಕಾಯುಕ್ತ ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದರು.

ಮುಂದೆ ಕಾಂಗ್ರೆಸೇತರ ಸರ್ಕಾರ ರಚನೆಯಾದಲ್ಲಿ ಅಧಿಕಾರಯುಕ್ತ ಸಮಿತಿಯ ಎಲ್ಲಾ ಅಕ್ರಮಗಳನ್ನು ತನಿಖೆ ಮಾಡುವುದಾಗಿ ಹೇಳಿದರು. ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು. ಪ್ರತಿಯೊಂದು ಯೋಜನೆ ಕಾಮಗಾರಿಗಳಿಗೆ ನೈಜ ದರಪಟ್ಟಿಗಿಂತಲೂ ಶೇ.32 ರಿಂದ 64ಕ್ಕೂ ಹೆಚ್ಚು ಮೊತ್ತವನ್ನು ಪಾವತಿಸಲು ಅನುಮೋದನೆ ನೀಡಿರುವ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ ಎಂದು ಆರೋಪಿಸಿದ ಅವರು, ತಮ್ಮ ಆರೋಪಗಳಿಗೆ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿದರು.

Facebook Comments

Sri Raghav

Admin