ಅಧಿಕಾರಿಗಳನ್ನು ಗುಲಾಮಗಿರಿಗಿಂತಲೂ ಕಡೆಯಾಗಿ ಕಾಣಲಾಗುತ್ತಿದೆ : ಎಚ್‍ಡಿಕೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

HDK--01

ಬೆಂಗಳೂರು, ಫೆ.10– ರಾಜ್ಯದ ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳನ್ನು ಗುಲಾಮಗಿರಿಗಿಂತಲೂ ಕಡೆಯಾಗಿ ಕಾಣಲಾಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಆರೋಪಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧಿಕಾರ ದುರುಪಯೋಗಪಡಿಸಿಕೊಂಡು ಸಣ್ಣತನದ ರಾಜಕಾರಣ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಹಿಡಿತ ಅಧಿಕಾರಿಗಳ ಮೇಲಿಲ್ಲ. ಕೆಲವು ಇಲಾಖೆಗಳಲ್ಲಿ ಮೇಲಿನ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ.   ಹೀಗಾಗಿ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿರುವ ಘಟನೆಗಳು ನಡೆದಿವೆ. ವಿರೋಧ ಪಕ್ಷದವರ ಮೇಲೆ ಅಧಿಕಾರ ದುರ್ಬಳಕೆ ಮಾಡುತ್ತಿರುವುದರಿಂದ ಜನಪ್ರತಿನಿಧಿಗಳ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಬೇಕೆಂದರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ. ಹಲವು ವಿಷಯಗಳಲ್ಲಿ ಸಾಕ್ಷಿ ದೊರೆಯುವುದಿಲ್ಲ ಎಂದ ಅವರು, ರಾಮನಗರದ ವೈದ್ಯಾಧಿಕಾರಿಯೊಬ್ಬರು 5 ಲಕ್ಷ ರೂ. ಹಣ ನೀಡಿ ಬಂದಿದ್ದೇನೆ. ಯಾರಿಗೂ ಕೇರ್ ಮಾಡಲ್ಲ ಎನ್ನುತ್ತಾರೆ. ಅವರನ್ನು ವರ್ಗಾವಣೆ ಮಾಡಿ ಎಂದರೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ವರದಿ ಪಡೆಯಲು ಮುಂದಾಗುತ್ತಾರೆ. ವೈದ್ಯಾಧಿಕಾರಿ ನನಗಂತೂ ಹಣ ಕೊಟ್ಟಿಲ್ಲ. ಸಚಿವರಿಗೆ ಕೊಟ್ಟಿದ್ದಾರೋ, ಪ್ರಧಾನ ಕಾರ್ಯದರ್ಶಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಮಂತ್ರಿಯಾದ ಮೇಲೆ ತಾಕತ್ತು ಪ್ರದರ್ಶನ ಮಾಡುವುದಾಗಿ ಹೇಳಿದ ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರ ತಾಕತ್ತು ಈಗ ಎಲ್ಲಿ ಹೋಗಿದೆ ಎಂದು ಛೇಡಿಸಿದರು.

ಭ್ರಷ್ಟ ಅಧಿಕಾರಿಗಳನ್ನು ಸುಟ್ಟುಹಾಕಿ ಎಂದು ಅವರು ಹೇಳಿದ್ದರು. ಅವರ ಪ್ರೇರಣೆಯಿಂದಲೇ ಜನರು ಗದಗದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರಬೇಕು. ಬೆಂಕಿ ಹಾಕಿದವರನ್ನು ಈಗ ಬಂಧಿಸಲಾಗಿದೆ. ಗೃಹ ಸಚಿವರೇ ಮೇಲ್ಮನೆಯಲ್ಲಿ ಲಕ್ಷ್ಮೇಶ್ವರ ಠಾಣೆಯ ಪಿಎಸ್‍ಐ 40 ಸಾವಿರ ಲಂಚ ಕೇಳಿದ್ದರು ಎಂದು ಹೇಳಿದ್ದಾರೆ. ಮಂತ್ರಿಯಾದವರು ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಅದರ ದುಷ್ಪರಿಣಾಮದ ಅರಿವಿರಬೇಕು. ಉಪದೇಶ ಮಾಡುವವರಿಂದಲೇ ಈ ರೀತಿಯಾದರೆ ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.  ಮದ್ದೂರು ತಾಲೂಕಿನ ಕಾರ್ಯಕ್ರಮವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಸರ್ಕಾರ ದುರಾವಸ್ಥೆಯಲ್ಲಿತ್ತು. ಈಗ ಚುರುಕುಗೊಳಿಸಲಾಗಿದ್ದು, ಸರ್ಕಾರ ಎಚ್ಚೆತ್ತುಕೊಂಡಿದೆ ಎಂದು ರಮೇಶ್‍ಕುಮಾರ್ ಅವರೇ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಳೆದ ನಾಲ್ಕು ವರ್ಷಗಳಿಂದಲೂ ಗಣಿಗಾರಿಕೆಗೆ ಹೊಸ ನೀತಿ ತರುವುದಾಗಿ ಸರ್ಕಾರ ಹೇಳುತ್ತಲೇ ಇದೆ. ಎಲ್ಲಿಗೆ ಬಂತು ಸರ್ಕಾರದ ನೀತಿ, ಮರಳು ದಂಧೆಗೆ ಯಾರು ಕಾರಣ ಎಂದು ಪ್ರಶ್ನಿಸಿದರು. ತಮ್ಮ ಕ್ಷೇತ್ರದ ಗ್ರಾಮ ಪಂಚಾಯಿತಿಯೊಂದರ ಉಪಾಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಬೇ ಕಿದ್ದ ಪಂಚಾಯತ್ ಸದಸ್ಯರನ್ನು ಅಪಹರಣ ಮಾಡಿದ್ದರು. ಆ ಅಪಹರಣದ ಬಗ್ಗೆ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಇದೆ. ಅನುಭವಿ ಸಚಿವರ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರು ಯಾರ ಬಳಿ ನೋವು ಹೇಳಿಕೊಳ್ಳಬೇಕು ಎಂದು ಸದನದ ಗಮನ ಸೆಳೆದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin