ಅಧಿಕಾರಿಗಳ ವಿರುದ್ಧ ಕೆಂಡ ಕಾರಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ
ಬೆಂಗಳೂರು, ಆ.31-ರಾಜ್ಯದ ಜನ ಮನೆ ಕಟ್ಟಲು ಮರಳು ಸಿಗದೆ ತತ್ತರಿಸುತ್ತಿರುವಾಗ ನೀವು ಮರಳು ಮಾಫಿಯಾ ಜೊತೆ ಕೈ ಜೋಡಿಸಿ ಜಲ್ಲಿ ಪುಡಿ ಉತ್ಪಾದನೆಗೆ ಅಡ್ಡಗಾಲು ಹಾಕುತ್ತಿದ್ದೀರ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ತುರ್ತಾಗಿ ಜಲ್ಲಿ ಪುಡಿ ಉತ್ಪಾದನೆಗೆ ಪರವಾನಗಿ ನೀಡದಿದ್ದರೆ ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮರಳಿನ ತೀವ್ರ ಅಭಾವ ಇರುವ ಹಿನ್ನೆಲೆಯಲ್ಲಿ ಎಂ.ಸ್ಯಾಂಡ್ (ಜಲ್ಲಿಪುಡಿ) ಉತ್ಪಾದನೆಗೆ ಪರವಾನಗಿ ನೀಡಲು ಮೂರು ವಾರಗಳ ಹಿಂದೆ ಸರ್ಕಾರ ಆದೇಶ ನೀಡಿತ್ತು. ಆದರೆ ಮರಳು ಮಾಫಿಯಾ ಜೊತೆ ಶಾಮೀಲಾದ ಕೆಲ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿ ತಕ್ಷಣವೇ ಪರವಾನಗಿ ನೀಡಬೇಡಿ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ ತುಮಕೂರಿನ ಮೂರು ಸ್ಥಳಗಳನ್ನು ಹೊರತುಪಡಿಸಿದರೆ ಬೇರೆ ಹಲವು ಜಿಲ್ಲೆಗಳಲ್ಲಿ ಎಂ.ಸ್ಯಾಂಡ್ ಉತ್ಪಾದನೆಗೆ ಅವಕಾಶವಿದೆ ಮತ್ತು ಉತ್ಪಾದನೆಗಾಗಿ ಉದ್ಯಮಗಳು ಅರ್ಜಿ ಸಲ್ಲಿಸಿದ್ದರೂ ಜಿಲ್ಲಾಧಿಕಾರಿಗಳು ಮೇಲಧಿಕಾರಿಗಳು ಮೌಖಿಕ ಸೂಚನೆ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಎಂ.ಸ್ಯಾಂಡ್ ಉತ್ಪಾದನೆಗೆ ಅನುಮತಿ ಕೋರಿ ಬಂದಿದ್ದ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಇತ್ಯರ್ಥ ಮಾಡಿರಲಿಲ್ಲ. ಹೀಗೆ ಸರ್ಕಾರದ ಮೇಲ್ಮಟ್ಟದಲ್ಲಿ ಕೆಲವೇ ಅಧಿಕಾರಿಗಳು ಮರಳು ಮಾಫಿಯಾ ಜೊತೆ ಶಾಮೀಲಾಗಿ ನೀಡಿರುವ ಈ ಮೌಖಿಕ ಸೂಚನೆ ಕುರಿತು ಹಲವೆಡೆಯಿಂದ ಆರೋಪಗಳು ಕೇಳಿಬಂದಿದ್ದವು.
ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಮಾತನಾಡಿ, ಎಂ.ಸ್ಯಾಂಡ್ ಉತ್ಪಾದನೆಗೆ ಅನುಮತಿ ನೀಡದಿರುವಂತೆ ಮೇಲಧಿಕಾರಿಗಳು ತಮಗೆ ಮೌಖಿಕ ಸೂಚನೆ ನೀಡಿದ್ದಾರೆ. ಹೀಗಾಗಿ ಸುಮ್ಮನಿದ್ದೇವೆ ಎಂಬ ಅಸಹಾಯಕತೆ ತೋಡಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾನೂನು ಸಚಿವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮರಳಿಗೆ ರಾಜ್ಯದ ಜನ ಪರದಾಡುತ್ತಿರುವಾಗ ನೀವು ಮರಳು ಮಾಫಿಯಾ ಜೊತೆ ಕೈ ಜೋಡಿಸಿ ನಿಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಷ್ಟು ಬೇಗ ಎಂ.ಸ್ಯಾಂಡ್ ಉತ್ಪಾದನೆಗೆ ಅವಕಾಶ ನೀಡದಿದ್ದರೆ ಮುಖ್ಯಮಂತ್ರಿಗಳಿಗೆ ನೇರ ದೂರು ನೀಡುವುದಾಗಿ ಹೇಳಿದ್ದರಿಂದ ಒಂದೊಂದೇ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.