ಅಧಿಕಾರಿಗ ಸಂಘರ್ಷ, 32ಕ್ಕೂ ಹೆಚ್ಚು ಕೈದಿಗಳ ಸ್ಥಳಾಂತರ, ಕುಟುಂಬದವರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Parappana-Agrahara-Jail

ಬೆಂಗಳೂರು,ಜು.17-ಡಿಐಜಿ ರೂಪಾ, ಡಿಜಿಪಿ ಸತ್ಯನಾರಾಯಣ್ ಅವರ ನಡುವಿನ ಸಂಘರ್ಷ ಕೈದಿಗಳ ಮೇಲೆ ಪರಿಣಾಮ ಬೀರಿದೆ. 32ಕ್ಕೂ ಹೆಚ್ಚು ಕೈದಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಿದ್ದು , ಕೈದಿಗಳ ಕುಟುಂಬದವರು ಆತಂಕಕ್ಕೀಡಾಗಿದ್ದಾರೆ. ನಮ್ಮ ಮನೆಯವರು ಎಲ್ಲಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಟಿವಿಗಳಲ್ಲಿ ಅವರನ್ನು ಎಲ್ಲೋ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ನೋಡಿದೆವು. ಎಲ್ಲಿ ಇಟ್ಟಿದ್ದಾರೆ, ಯಾವ ಜಿಲ್ಲೆಗೆ ಕರೆದುಕೊಂಡು ಹೋಗಿದ್ದಾರೆ ಎಂಬುದು ಗೊತ್ತಾಗಿಲ್ಲ.

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಹೋದರೆ ನೋಡಲು ಬಿಡುತ್ತಿಲ್ಲ ಎಂದು ಹಲವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮಾಜದಲ್ಲಿ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಕೈದಿಗಳನ್ನು ಅಮಾನವೀಯವಾಗಿ ನಡೆಸಿಕೊಂಡು ಮನಬಂದಂತೆ ಥಳಿಸಿ, ತಮ್ಮ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಸಾಕ್ಷಿ ಹೇಳುತ್ತಾರೆ ಎಂಬ ಕಾರಣಕ್ಕೆ ಅವರನ್ನು ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಏನಾಗಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಹಲವು ಕೈದಿಗಳ ಪತ್ನಿಯರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ  ಅವ್ಯವಹಾರವನ್ನು ಬಯಲಿಗೆಳೆದ ಡಿಐಜಿ ರೂಪಾ ಅವರನ್ನು ಬೆಂಬಲಿಸಿದ ಕಾರಣಕ್ಕೆ ಮೂರು ಜನ ಕೈದಿಗಳನ್ನು ಬೆಳಗಾವಿಯ ಹಿಂಡಲಗ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ಸ್ಥಳಾಂತರಕ್ಕೂ ಮುನ್ನ ಕೈದಿಗಳಿಗೆ ತೀವ್ರವಾಗಿ ಥಳಿಸಿರುವುದು ಕಂಡುಬರುತ್ತಿದೆ. ಅವರನ್ನು ಪೊಲೀಸ್ ವ್ಯಾನಿನಿಂದ ಇಳಿಸಿ ನಡೆಸಿಕೊಂಡು ಹೋಗುವಾಗ ಅವರ ಪರಿಸ್ಥಿತಿಯನ್ನು ನೋಡಿದರೆ ಗೊತ್ತಾಗುತ್ತದೆ.   ಇದೇ ರೀತಿ ಮೈಸೂರು, ಬಳ್ಳಾರಿ, ಧಾರವಾಡ ಜೈಲುಗಳಿಗೂ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದ್ದು , ಆತಂಕಕ್ಕೆ ಒಳಗಾಗಿರುವ ಕೈದಿಗಳ ಕುಟುಂಬದವರು ತಮ್ಮವರನ್ನು ಎಲ್ಲಿಟ್ಟಿದ್ದಾರೆಂದು ಎಲ್ಲ ಕಡೆ ಹುಡುಕುತ್ತಿದ್ದಾರೆ.   ಡಿಐಜಿ ರೂಪಾ ಅವರಿಗೆ ಕೇಂದ್ರ ಕಾರಾಗೃಹದ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಹಲವು ಕೈದಿಗಳಿಗೆ ಥಳಿತ, ಮತ್ತಷ್ಟು ಕೈದಿಗಳಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಿರುವುದರಿಂದ ಕೈದಿಗಳನ್ನು ಭೇಟಿ ಮಾಡಲು ಬರುತ್ತಿದ್ದವರಿಗೆ ಗೊಂದಲ ಉಂಟಾಗಿದೆ.

ಒಳಗಿದ್ದ ನಮ್ಮವರಿಗೆ ಏನಾಗಿದೆಯೋ, ಎಲ್ಲಿಗೆ ಕಳುಹಿಸಿದ್ದಾರೋ, ಯಾವ ರೀತಿ ಥಳಿಸಿದ್ದಾರೆಯೋ… ಎಂದು ಗೊತ್ತಾಗುತ್ತಿಲ್ಲ ಎಂದು ಕೇಂದ್ರ ಕಾರಾಗೃಹದ ಬಳಿ ಹಲವರು ತಮ್ಮ ಅಳಲು ತೋಡಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ.  ಮತ್ತೆ ಕೆಲವರು ದೂರವಾಣಿ ಮೂಲಕ ಬಳ್ಳಾರಿ, ಬಿಜಾಪುರ, ಮೈಸೂರು, ಧಾರವಾಡ, ಬೆಳಗಾವಿಯಲ್ಲಿ ವಿಚಾರಿಸತೊಡಗಿರುವುದು ಕಂಡುಬಂದಿದೆ. ಮಾನವ ಹಕ್ಕುಗಳ ಹೋರಾಟಗಾರರು , ಬುದ್ದಿಜೀವಿಗಳು, ಸಾಹಿತಿಗಳು, ಬರಹಗಾರರು ಈ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಎಲ್ಲ ಸಂದರ್ಭದಲ್ಲೂ ಮಾತನಾಡುವ ಇವರು ಹೀಗೇಕೆ ಮೌನ ವಹಿಸಿದ್ದಾರೆ ಎಂದು ಆತಂಕಕ್ಕೊಳಗಾಗಿರುವ ಕೈದಿ ಕುಟುಂಬದವರು ಆರೋಪಿಸಿದ್ದಾರೆ.

ಜೈಲು ಅಕ್ರಮಗಳ ಸಾಕ್ಷ್ಯ ನಾಶಕ್ಕಾಗಿ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ. ಜೈಲಿನಲ್ಲಿ ದಾಂಧಲೆ ನಡೆಸಿದವರನ್ನು ನಿಯಮಾವಳಿ ಪ್ರಕಾರ ಸ್ಥಳಾಂತರ ಮಾಡಲಾಗಿದೆ ಎಂಬುದು ಅಧಿಕಾರಿಗಳ ತರ್ಕವಾಗಿದ್ದರೂ ಜೈಲಿನ ಅಕ್ರಮ, ಅವ್ಯವಹಾರದ ಬಗ್ಗೆ ತನಿಖೆ ಆರಂಭಕ್ಕೂ ಮುನ್ನವೇ ಕೈದಿಗಳ ಬಾಯಿ ಬಂದ್ ಮಾಡುವ ಹುನ್ನಾರ ಇದಾಗಿದೆ. ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯಕುಮಾರ್ ನೇತೃತ್ವದ ಸಮಿತಿ ಕಾರಾಗೃಹಕ್ಕೆ ಆಗಮಿಸುವ ಮುನ್ನ ಕೈದಿಗಳ ಸ್ಥಳಾಂತರಿಸಿರುವುದು ಅಕ್ರಮದ ಬಗ್ಗೆ ದನಿ ಎತ್ತುವವರ ದನಿ ಅಡಗಿಸುವ ಹುನ್ನಾರವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇಂದು ತನಿಖಾ ಸಮಿತಿ ಕೇಂದ್ರ ಕಾರಾಗೃಹಕ್ಕೆ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಆಗಮಿಸಲಿದ್ದು , ತಂಡ ಪರಿಶೀಲನೆ ನಡೆಸುವ ಮುನ್ನವೇ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನವನ್ನು ಅಲ್ಲಿನ ಅಧಿಕಾರಿಗಳು ಮಾಡಿದ್ದಾರೆ.  ಅಕ್ರಮಗಳ ಬಗ್ಗೆ ಕೈದಿಗಳು ಬಾಯ್ಬಿಡದಂತೆ ಬಂದ್ ಮಾಡಿದ್ದಾರೆ. ವಿರೋಧಿಸುವವರನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ. ಹೀಗಾದರೆ ವ್ಯವಸ್ಥೆ ಸರಿಪಡಿಸುವುದಾದರೂ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin