ಅಧಿವೇಶನಕ್ಕೆ ಅಧಿಕಾರಿಗಳ ಹಾಜರಿ ಕಡ್ಡಾಯ, ಗೈರಾದರೆ ಶಿಸ್ತು ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Session-Protest--01

ಬೆಂಗಳೂರು, ಫೆ.13- ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯುವ ಸಂದರ್ಭದಲ್ಲಿ ನಿಯೋಜಿತರಾದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಒಂದು ವೇಳೆ ಅಧಿಕಾರಿಗಳು ಗೈರು ಹಾಜರಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಸೂಚನೆ ನೀಡಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್‍ನ ಅಧಿವೇಶನದಲ್ಲಿ ಸಚಿವರು, ಶಾಸಕರು ಜತೆಗೆ ಅಧಿಕಾರಿಗಳ ಹಾಜರಾತಿ ಕೊರತೆಯ ಬಗ್ಗೆ ಪ್ರತಿಪಕ್ಷಗಳು ಪದೇ ಪದೇ ಆಕ್ಷೇಪ ಎತ್ತುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಹಾಜರಾತಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಅದರಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗಳ ಮುಖ್ಯಸ್ಥರಿಗೆ ಈ ಸೂಚನೆ ನೀಡಿದೆ. ಫೆ.16ರಿಂದ 28ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು , ವಿಧಾನಸಭೆ ಮತ್ತು ವಿಧಾನ ಪರಿಷತ್‍ನ ಕಾರ್ಯ ಕಲಾಪಗಳು ನಡೆಯುವ ಸಂದರ್ಭದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ವ್ಯವಸ್ಥಾಪಕ ನಿರ್ದೇಶಕರು, ಇಲಾಖಾ ಮುಖ್ಯಸ್ಥರು, ಸಂಬಂಧಪಟ್ಟ ಅಧೀನ ಕಾರ್ಯದರ್ಶಿಗಳು ಸೇರಿದಂತೆ ನಿಯೋಜಿತರಾದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

ಮುಖ್ಯಮಂತ್ರಿಯವರ ಸೂಚನೆ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ಈ ವಿಚಾರವನ್ನು ತಂದಿದ್ದು , ಯಾವುದೇ ಕಾರಣಕ್ಕೂ ಗೈರು ಹಾಜರಾಗದಂತೆ ಸೂಚಿಸಲಾಗಿದೆ. ಸರ್ಕಾರದ ವಿಶೇಷ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಹಾಗೂ ನಿರ್ದೇಶಕರುಗಳು ಉಭಯ ಸದನಗಳಲ್ಲಿ ಪೂರ್ಣ ದಿನ ಹಾಜರಿರುವಂತೆ ಸೂಚಿಸಲಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಅಧಿಕಾರಿಗಳ ಗ್ಯಾಲರಿಯಲ್ಲಿ ಹಾಜರಿರಲು ಸಾಧ್ಯವಾಗದಿದ್ದರೆ ಅಂತಹ ಅಧಿಕಾರಿ ಬದಲಿಗೆ ಸರದಿ ಪಟ್ಟಿಯಲ್ಲಿರುವ ವಿವಿಧ ಇಲಾಖೆಗಳ ಸಮಾನ ದರ್ಜೆಯ ಅಧಿಕಾರಿಗಳನ್ನು ಹಾಜರಿರುವಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತವಾಗಿ ತಿಳಿಸಬೇಕೆಂದು ಸೂಚಿಸಲಾಗಿದೆ.

ಆಯಾ ದಿನದಂದು ಸದನದಲ್ಲಿ ಪ್ರಸ್ತಾಪವಾಗುವ ಎಲ್ಲಾ ಮುಖ್ಯ ವಿಷಯಗಳ ವರದಿಯನ್ನು ನಿಗದಿತ ನಮೂನೆಯಲ್ಲಿ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಕಳುಹಿಸಬೇಕು. ಒಂದು ವೇಳೆ ಶನಿವಾರದಂದು ಅಧಿವೇಶನ ನಡೆದಿದ್ದೇ ಆದಲ್ಲಿ ಶುಕ್ರವಾರ ಹಾಜರಿದ್ದ ಅಧಿಕಾರಿಗಳೇ ಶನಿವಾರವೂ ಹಾಜರಾಗಬೇಕು.  ಈಗಾಗಲೇ ಅಧಿವೇಶನದಲ್ಲಿ ಹಾಜರಿರುವಂತೆ ನಿಯೋಜಿಸಿರುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸ್ಪಷ್ಟಪಡಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin