ಅನಧಿಕೃತ ಪಂಪಸೆಟ್ – ಪೈಪ್ ಅಳವಡಿಕೆ : ಕ್ರಮಕ್ಕೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

belagam-krama
ಗೋಕಾಕ,ಸೆ.1- ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆ ಹಾಗೂ ವಿತರಣಾ ಕಾಲುವೆಗಳಲ್ಲಿ ಕೆಲವರು ಅನಧಿಕೃತ ಪಂಪಸೆಟ್ ಹಾಗೂ ಪೈಪಗಳನ್ನು ಅಳವಡಿಸಿಕೊಂಡಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಬೇಕು. ಕಾಲುವೆಗಳನ್ನು ಒಡೆದಿದ್ದರಿಂದ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿರುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜರಕಿಹೊಳಿ ಎಚ್ಚರಿಸಿದರು.

ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜಲಸಂಪನ್ಮೂಲ ಇಲಾಖಾಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಲುವೆಯ ಕೆಲವು ಭಾಗಗಳು ಒಡೆದಿದ್ದು ಹಾಗೂ ಗೇಟ್‍ಗಳು ಮುರಿದಿದ್ದು, ಅವುಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಘಟಪ್ರಭಾ ಬಲದಂಡೆ ಕಾಲುವೆಯ ಅಡಿಯಲ್ಲಿ ಬರುವ ಎಲ್ಲ ಕಾಲುವೆ-ಉಪಕಾಲುವೆಗಳ ಕೊನೆಯ ಭಾಗದವರೆಗೆ ಕಾಲುವೆ ನೀರು ಹರಿಸುವಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸೆ. 8ರಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದರು. ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ಈ ಏತ ನೀರಾವರಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಕಲ್ಮಡ್ಡಿ ಯಾತ ನೀರಾವರಿಯಿಂದ 2700 ಹೆಕ್ಟರ ಜಮೀನು ನೀರಾವರಿ ಪ್ರದೇಶವಾಗಲಿದೆ. ಘಟಪ್ರಭಾ ನದಿಯಿಂದ ತಳಕಟ್ನಾಳ ಹತ್ತಿರ ನೀರನ್ನು ಲಿಫ್ಟ್ ಮಾಡಿ ಗೋಸಬಾಳ, ಕೌಜಲಗಿ, ಬಿಲಕುಂದಿ, ಕಪರಟ್ಟಿ, ಖಂಡ್ರಟ್ಟಿ ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಘಟಪ್ರಭಾ ಬಲದಂಡೆ ಕಾಲುವೆಯ ನೀರಾವರಿಗೆ ಒಳಪಡದ ಎತ್ತರದ ಪ್ರದೇಶಕ್ಕೆ ಘಟಪ್ರಭಾ ನದಿಯಿಂದ ಲಿಫ್ಟ್ ಮೂಲಕ ನೀರು ಒದಗಿಸುವುದು ಇದರ ಉದ್ಧೇಶವಾಗಿದೆ ಎಂದು ಹೇಳಿದರು.

ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ವ್ಯಾಪ್ತಿಯಲ್ಲಿ ಬರುವ ಎಸ್‍ಸಿಪಿ ಮತ್ತು ಟಿಎಸ್‍ಪಿ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಅನುಷ್ಠಾನಗೊಳಿಸಲು ಕ್ರೀಯಾಯೋಜನೆಯೊಂದನ್ನು ಸಲ್ಲಿಸುವಂತೆ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು. ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಮೂಹಿಕ ಯಾತ ನೀರಾವರಿ ಯೋಜನೆ ಸೇರಿದಂತೆ ಗ್ರಾಮಗಳಲ್ಲಿ ಕಾಂಕ್ರೀಟ ರಸ್ತೆ ಮತ್ತು ಚರಂಡಿ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೊಂಡು ಚುರುಕಿನಿಂದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಘಟಪ್ರಭಾ ಬಲದಂಡೆ ಕಾಲುವೆಗೆ ಘೋಡಗೇರಿ ಬಳಿ ಹಿರಣ್ಯಕೇಶಿ ನದಿ ನೀರನ್ನು 800 ಕ್ಯೂಸೆಕ್ಸ್ ಲಿಫ್ಟ್ ಮಾಡುವುದರಿಂದ ನಮ್ಮ ಭಾಗದ ರೈತರಿಗೆ ವರದಾನವಾಗಲಿದೆ. ಮುಂದಿನ ವರ್ಷದಿಂದ ಈ ಭಾಗದ ರೈತ ಸಮೂಹಕ್ಕೆ ನೀರು ದೊರಕಲಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತಿ ಸದಸ್ಯ ಗೋವಿಂದ ಕೊಪ್ಪದ, ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಎಚ್.ಡಿ. ಮುಲ್ಲಾ, ಕಾರ್ಯನಿರ್ವಾಹಕ ಅಭಿಯಂತರ ಆರ್.ಬಿ. ಕುಲಕರ್ಣಿ, ಎಂ.ಎಸ್. ಗಿಡ್ಡೋಳಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಂ. ಪಟೇಲ, ಎಂ.ಎಚ್. ಸಿದ್ರಾಯಿ, ಆರ್.ಎ. ಗಾಣಿಗೇರ, ಎಸ್.ಜಿ. ಲಕ್ಕುಂಡಿ, ಎಸ್.ಟಿ. ಕಳಸಪ್ಪಗೋಳ, ಎಚ್.ಎಸ್. ಕಾಕಂಡಕಿ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin