ಅನುರಾಗ್ ತಿವಾರಿ ನಿಗೂಢ ಸಾವು : ಐಎಎಸ್ ವಲಯದಲ್ಲಿ ಶುರುವಾದ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Anuraag-Tiwary
ಬೆಂಗಳೂರು, ಮೇ. 17-ಉತ್ತರ ಪ್ರದೇಶದ ಲಕ್ನೋದಲ್ಲಿ ಅನುಮಾನಾಸ್ಪದವಾಗಿ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವನ್ನಪ್ಪಿರುವುದು ಐಎಎಸ್ ಅಧಿಕಾರಿ ವಲಯದಲ್ಲಿ ಆತಂಕವನ್ನುಂಟು ಮಾಡಿದೆ.  ಕಳೆದ ಮೂರು ವರ್ಷಗಳ ಹಿಂದೆ ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ದಕ್ಷ ಅಧಿಕಾರಿ ಕರ್ನಾಟಕ ಕೇಡಾರ್‍ನ ಐಎಎಸ್ ಅಧಿಕಾರಿ ಉತ್ತರಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವುದು ಐಎಎಸ್ ವಲಯದಲ್ಲಿ ಸಹಜವಾಗಿಯೇ ಆತಂಕವನ್ನು ಉಂಟು ಮಾಡಿದೆ.  ಸಾಕಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳು ಅನುರಾಗ್ ತಿವಾರಿ ಅವರ ನಿಧನಕ್ಕೆ ದಿಗ್ಭ್ರಮೆ ಶೋಕ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ತಿವಾರಿ ಅವರ ಸಾವಿನ ಸುದ್ದಿ ಕೇಳಿ ಆಘಾತ ವ್ಯಕ್ತಪಡಿಸಿ ಸ್ನೇಹಿತ ಸಾವಿಗೆ ಕಂಬನಿ ಮಿಡಿದಿದ್ದಾರೆ.ತುಮಕೂರು ಜಿಲ್ಲಾಧಿಕಾರಿಯಾಗಿ ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ದಕ್ಷವಾಗಿ ಕಾರ್ಯನಿರ್ವಹಿಸಿದ್ದ ಅನುರಾಗ್ ತಿವಾರಿ ಒಂದೇ ತಿಂಗಳಲ್ಲಿ 1180 ಕಡತಗಳನ್ನು ವಿಲೇವಾರಿ ಮಾಡಿದ್ದರು. ಅಲ್ಲದೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಅಷಾದ್ ಆರ್.ಪರೀದ್ ಕೂಡ ತಿವಾರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ರಮಣ್‍ಗುಪ್ತಾ ತಮ್ಮ ಶೋಕ ಸಂದೇಶದಲ್ಲಿ ತಿವಾರಿ ನಿಧನ ಹೃದಯಸ್ಪರ್ಶಿ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.
ಅನುರಾಗ್ ತಿವಾರಿ ಅವರು ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಉತ್ತಮ ಸಹಕಾರ ನೀಡಿದ್ದರು. ಎಲ್ಲರನ್ನೂ ಸ್ನೇಹಭಾವದಿಂದಲೇ ನೋಡುತ್ತಿದ್ದರು ಎಂದು ನೊಂದು ತಿಳಿಸಿದ್ದಾರೆ.  ಇದಲ್ಲದೆ, ಹಲವು ಹಿರಿಯ ಅಧಿಕಾರಿಗಳು ಅನುರಾಗ್ ತಿವಾರಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವುದಲ್ಲದೆ, ಈ ರೀತಿ ಅನುಮಾನಾಸ್ಪದ ಸಾವಿಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin