ಅನೈತಿಕ ಸಂಬಂಧದ ಹಿನ್ನೆಲೆ : ಪತಿ ಹಂತಕಿ ಪತ್ನಿ-ಪ್ರಿಯಕರ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

arrested

ಮದ್ದೂರು, ಮೇ 3- ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಮದ್ದೂರು ತಾಲೂಕಿನ ಗುಡೇಮಾರನಹಳ್ಳಿ ನಿವಾಸಿ ಶಿವರಾಜ್ ಎಂಬುವರ ಪತ್ನಿ ಆಶಾ (35) ಹಾಗೂ ಪ್ರಿಯಕರ ನವೀನ್ ಬಂಧಿತ ಆರೋಪಿಗಳು.ಆಶಾ ಏಳು ವರ್ಷಗಳ ಹಿಂದೆ ಶಿವರಾಜ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶಿವರಾಜ್ ಹಳೆ ಎಂಸಿ ರಸ್ತೆಯಲ್ಲಿರುವ ಸೆರಾಮಿಕ್ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಸಮೀಪದ ಶಿಕ್ಷಕರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ಶಿವರಾಜ್ ಸಂಬಂಧಿ ನವೀನ್ ಎಂಬಾತ ಪದೇ ಪದೇ ಮನೆಗೆ ಬಂದು ಹೋಗುತ್ತಿದ್ದು, ಆಶಾಳೊಂದಿಗೆ ಸಲುಗೆಯಿಂದಿದ್ದ. ಶಿವರಾಜ್ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಆಶಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಪತ್ನಿ ಹಾಗೂ ನವೀನ್ ವರ್ತನೆ ಮೇಲೆ ಶಿವರಾಜ್‍ಗೆ ಅನುಮಾನ ಬಂದು ಇಬ್ಬರಿಗೂ ಬುದ್ಧಿ ಹೇಳಿದ್ದ.ಆದರೂ ಶಿವರಾಜ್ ಮಾತಿಗೆ ಮನ್ನಣೆ ನೀಡದ ಇಬ್ಬರೂ ತಮ್ಮ ಪ್ರಣಯದಾಟವನ್ನು ಮುಂದುವರಿಸಿದ್ದರು.

ಕಳೆದ ಸೋಮವಾರ ಶಿವರಾಜ್ ಮನೆಯಲ್ಲಿಲ್ಲದ ಸಂದರ್ಭದಲ್ಲಿ ನವೀನ್ ಮತ್ತು ಆಶಾ ರೂಮಿನಲ್ಲಿದ್ದರು. ಮನೆಗೆ ಬಂದ ಶಿವರಾಜ್ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದ.ಕೋಪೋದ್ರಿಕ್ತನಾದ ಶಿವರಾಜ್ ಮಚ್ಚಿನಿಂದ ಇಬ್ಬರ ಮೇಲೂ ಹಲ್ಲೆ ನಡೆಸಲು ಮುಂದಾದಾಗ ಆತನ ಕೈಲಿದ್ದ ಮಚ್ಚನ್ನು ಕಸಿದುಕೊಂಡ ಆಶಾ ಮತ್ತು ನವೀನ್ ಅವರು ಶಿವರಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.  ತೀವ್ರ ರಕ್ತಸ್ರಾವದಿಂದ ಶಿವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು, ಆಶಾ ಮತ್ತು ನವೀನ್ ತಲೆಮರೆಸಿಕೊಂಡಿದ್ದರು.
ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಮದ್ದೂರು ಠಾಣೆ ಪಿಎಸ್‍ಐ ಕುಮಾರ್ ಮತ್ತು ಸಿಪಿಐ ಪ್ರಭಾಕರ್ ಅವರು ಚನ್ನಪಟ್ಟಣ ತಾಲೂಕಿನ ಕಣ್ವ ಗ್ರಾಮದ ಮನೆಯೊಂದರಲ್ಲಿ ತಲೆಮರೆಸಿಕೊಂಡಿದ್ದ ಹಂತಕಿ ಪತ್ನಿ ಹಾಗೂ ಆಕೆಯ ಪ್ರಿಯಕರ ನವೀನ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin