ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಪ್ರಮಾಣ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Annabhagya--01
ಬೆಂಗಳೂರು, ಮಾ.14- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡುತ್ತಿರುವ ಅಕ್ಕಿ ಪ್ರಮಾಣ ಮುಂದಿನ ತಿಂಗಳಿನಿಂದ ಏರಿಕೆಯಾಗುವ ಸಾಧ್ಯತೆಯಿದೆ. ನಾಳೆ ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನ 2017-18ನೆ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ತಮ್ಮ 12ನೆ ಬಜೆಟ್‍ನಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು 2 ರಿಂದ 3 ಕೆಜಿ ವರೆಗೆ ಏರಿಕೆ ಮಾಡಲಿದ್ದಾರೆ.

ಪ್ರಸ್ತುತ ಪ್ರತಿ ಕುಟುಂಬದ ಸದಸ್ಯರಿಗೆ ಉಚಿತವಾಗಿ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ನಾಳಿನ ಬಜೆಟ್‍ನಲ್ಲಿ ಇದರ ಪ್ರಮಾಣವನ್ನು 2 ರಿಂದ 3 ಕೆಜಿಗೆ ಹೆಚ್ಚಿಸಿ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಹಲವು ಅಡೆತಡೆಗಳ ನಡುವೆಯೇ ಅನ್ನಭಾಗ್ಯ ಯೋಜನೆ ಯಶಸ್ವಿಯಾಗುತ್ತಿರುವುದರಿಂದ ಅಕ್ಕಿ ಪ್ರಮಾಣವನ್ನುಹೆಚ್ಚಳ ಮಾಡಲು ಮುಖ್ಯಮಂತ್ರಿಯವರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.  ರಾಜ್ಯದ 1 ಕೋಟಿ 9 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಪ್ರತಿ ತಿಂಗಳು ರಾಜ್ಯ ಸರ್ಕಾರ 21ರೂ. ಹಾಗೂ ಕೇಂದ್ರ ಸರ್ಕಾರ 3ರೂ. ಸಬ್ಸಿಡಿ ನೀಡುತ್ತಿದ್ದು, ಒಟ್ಟು 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹೊರರಾಜ್ಯಗಳಿಂದ ಖರೀದಿಸಲಾಗುತ್ತದೆ. ಇದೀಗ ಇದರ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ 3 ಲಕ್ಷ ಮೆಟ್ರಿಕ್‍ಟನ್‍ಗೆ ಏರಿಕೆಯಾಗುವ ಸಂಭವವಿದೆ.

ಇನ್ನು ಮುಂದೆ ಪ್ರತಿ ತಿಂಗಳು ಮೊದಲ ವಾರದಲ್ಲೇ ಸರ್ಕಾರಿ ಹಾಗೂ ಖಾಸಗಿ ಒಡೆತನದ ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕೆಂಬ ನಿರ್ದೇಶನ ಇಲಾಖೆಯಿಂದ ಹೊರಡಲಿದೆ.

ಕಾರ್ಡ್‍ಗಳ ಜಫ್ತಿ:

ಒಂದು ವೇಳೆ ಫಲಾನುಭವಿಗಳು ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಿಂದ ಅಕ್ಕಿ ಖರೀದಿಸಿ ಇವುಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿ ಸಿಕ್ಕಿಬಿದ್ದರೆ ಬಿಪಿಎಲ್ ಕಾರ್ಡ್ ಜಫ್ತಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 34 ಲಕ್ಷ ಕೆಜಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಲವರು ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಕಡಿವಾಣ ಹಾಕುವ ಉದ್ದೇಶದಿಂದ ಕಾರ್ಡ್ ಜಫ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin