ಅಪಘಾತಕ್ಕೊಳಗಾಗಿ ಸಾಯುತ್ತಿದ್ದವನ ಫೋಟೋ ತೆಗೆಯುತ್ತಿದ್ದ ‘ಮಾನ’ವೀಯತೆ ಇಲ್ಲದ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

Koppala-01

ಕೊಪ್ಪಳ, ಫೆ. 2- ಅಪಘಾತದ ನಂತರ ಸಾಯುತ್ತಾ ಬಿದ್ದಿದ್ದ ಯುವಕನೊಬ್ಬ ರಕ್ಷಣೆಗಾಗಿ ಅಂಗಲಾಚುತ್ತಿದ್ದರೂ ನೂರಾರು ಜನ ಅದನ್ನು ನೋಡಿಯೂ ಸಹಾಯಕ್ಕೆ ಮುಂದಾಗದೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳದಲ್ಲಿ ನಡದಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ನರಳುತ್ತಾ ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಆ ಯುವಕನಿಗೆ ಸಹಾಯ ಮಾಡುವುದರ ಬದಲು ಅಲ್ಲಿ ಸುತ್ತುವರಿದಿದ್ದ ಜನ ತಮ್ಮ ಮೊಬೈಲ್‍ಗಳಿಂದ ಆ ಯಾತನೆಯ ನರಳಾಟವನ್ನು ಏನೂ ಆಗಿಲ್ಲವೆಂಬಂತೆ ಚಿತ್ರೀಕರಿಸಿಕೊಳ್ಳುತ್ತಿದ್ದುದು ಮಾನವೀಯತೆಗೇ ಹಾಕಿದ ಸವಾಲಿನಂತಿತ್ತು.

ಸುಮಾರು ಅರ್ಧ ತಾಸು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ. ನನ್ನನ್ನು ಬದುಕಿಸಿ, ಆಸ್ಪತ್ರೆಗೆ ಸೇರಿಸಿ, ಕುಡಿಯಲು ನೀರು ಕೊಡಿ ಎಂದು ಮರಣಶಯ್ಯೆಎಲ್ಲಿದ್ದ ವ್ಯಕ್ತಿ ದೀನನಾಗಿ ಬೇಢಿಕೊಳ್ಳುತ್ತಿದ್ದರೂ ಅಲ್ಲಿ ನೆರೆದಿದ್ದ ಯಾರೊಬ್ಬರ ಮನಸೂ ಕರಗದೇ ಇದ್ದದ್ದು ಸಮಾಜದ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಈಗ ಈ ವಿಡಿಯೊ ಫೂಟೇಜ್‍ಅನ್ನು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಜನ ವೀಕ್ಷಿಸಿದ್ದಾರೆ.  ಇಲ್ಲಿನ ಮಾರ್ಕೆಟ್‍ನಲ್ಲಿ ಕೆಲಸ ಮಾಡುವ ಅನ್ವರ್ ಅಲಿ ನಿನ್ನೆ ಬೆಳಗ್ಗೆ ಸೈಕಲ್ ಮೇಲೆ ಕೂಲಿಕೆಲಸಕ್ಕೆ ಹೋಗುತ್ತಿದ್ದ. ಹೊಸಪೇಟೆಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಇವನ ಸೈಕಲ್‍ಗೆ ಗುದ್ದಿ ನಿಲ್ಲದೆ ಹೊರಟು ಹೋಗಿದೆ. ತೀವ್ರವಾಗಿ ಗಾಯಗೊಂಡ ಅಲಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.

ಕೊನೆಗೆ ಆ್ಯಂಬುಲೆನ್ಸ್ ಬಂದು ಆಸ್ಪತ್ರೆಗೆ ಕರೆದೊಯ್ದಿದೆ. ಆಸ್ಪತ್ರೆ ತಲುಪುವ ವೇಳೆಗೆ ಅಲಿ ಕೊನೆಯುಸಿರೆಳೆದಿದ್ದಾನೆ. ಯಾರಾದರೂ ಸಹಾಯ ಮಾಡಿದ್ದರೆ ನನ್ನ ತಮ್ಮ ಬದುಕುಳಿಯುತ್ತಿದ್ದ ಎಂದು ಅಲಿಯ ಸಹೋದರ ರಿಯಾಜ್ ಅಳಲು ತೋಡಿಕೊಂಡಿದ್ದಾನೆ.  ಕೆಲ ದಿನಗಳ ಹಿಂದೆ ಮೈಸೂರು, ನೆಲಮಂಗಲಗಳಲ್ಲೂ ಇಂತಹದೇ ಘಟನೆಗಳು ನಡೆದ ನಿದರ್ಶನಗಳಿವೆ. ಅಪಘಾತಕ್ಕೊಳಗಾದವರನ್ನು ಸಾರ್ವಜನಿಕರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಯಾವುದೇ ಕಾನೂನು ಅಡ್ಡಿಯಾಗದು ಎಂದು ಸ್ವತಃ ಸರ್ಕಾರ-ನ್ಯಾಯಾಲಯಗಳು ಘೋಷಿಸಿದ್ದರೂ ಜನ ಯಾಕೆ ಹೀಗೆ ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ ಎಂಬುದು ಒಂದು ಬಿಡಿಸಲಾಗದ ಪ್ರಶ್ನೆಯಾಗುತ್ತಿದೆ. ಜೀವಕ್ಕಿಂತ ವಿಡಿಯೋ ತೆಗೆಯುವುದೇ ಮುಖ್ಯವಾಯಿತೇ..?

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin