ಅಪರಾಧ ಚಟುವಟಿಕೆ ಮಟ್ಟ ಹಾಕುವಂತೆ ಡಿಸಿಎಂ ಕಂ ಹೋಂ ಮಿನಿಸ್ಟರ್ ಪರಮೇಶ್ವರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwr--01

ಬೆಂಗಳೂರು , ಸೆ.12- ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ರೌಡಿ ಚಟುವಟಿಕೆ, ಸರಗಳ್ಳತನ ಮತ್ತಿತರ ಅಪರಾಧ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವ ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ತಮ್ಮ ವ್ಯಾಪ್ತಿಗಳಲ್ಲಿ ಇಂತಹ ಚಟುವಟಿಕೆಗಳು ಮಿತಿ ಮೀರಿರುವುದು ಕಂಡುಬಂದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಸಿಪಿಗಳು ಮತ್ತು ಮೇಲ್ಪಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕೆಲವು ಡಿಸಿಪಿಗಳ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳು ಮತ್ತು ಸರ ಗಳ್ಳತನ ಹೆಚ್ಚಾಗಿರುವುದಕ್ಕೆ ಗರಂ ಆದರು.

ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಗಸ್ತು ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. ನಗರದ ನಿವಾಸಿಗಳ ನೆಮ್ಮದಿ ಕೆಡಿಸುತ್ತಿರುವ ಸರಗಳ್ಳರ ಹಾವಳಿಯನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು. ಸರ ಅಪಹರಣ ಪ್ರಕರಣಗಳು ಹೆಚ್ಚಾಗಿ ನಡೆಯುವ ಪ್ರದೇಶಗಳಲ್ಲಿ ಬೆಳಗಿನ ಜಾವ ಮತ್ತು ಸಂಜೆಯ ವೇಳೆ ಗಸ್ತು ಹೆಚ್ಚಿಸಬೇಕು. ಇರಾನಿ ಗ್ಯಾಂಗ್‍ನಂತಹ ಅಂತಾರಾಜ್ಯ ಗ್ಯಾಂಗ್‍ಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಬೇಕು ಎಂದು ಸೂಚಿಸಿದರು. ಮಾದಕ ವಸ್ತುಗಳ ಮಾರಾಟ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಗೃಹ ಸಚಿವರು, ಬೇರೆ ರಾಜ್ಯಗಳಿಂದ ಮಾದಕ ವಸ್ತುಗಳನ್ನು ತಂದು ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿರುವವರನ್ನು ಪತ್ತೆ ಹಚ್ಚಿ ಈ ಜಾಲವನ್ನು ನಿರ್ಮೂಲನೆ ಮಾಡಬೇಕು. ರಾತ್ರಿ ಪ್ರಯಾಣಿಸುವ ಬಸ್‍ಗಳಲ್ಲಿ ಗಾಂಜಾ ತರುತ್ತಿರುವುದು ಬೆಳಕಿಗೆ ಬಂದಿದ್ದು, ನಗರ ಪ್ರವೇಶಿಸುವ ಬಸ್‍ಗಳ ಮೇಲೆ ನಿಗಾ ಇಡಬೇಕು. ಶಾಲಾ – ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಲಾಖೆಯಿಂದ ಏರ್ಪಡಿಸಬೇಕು ಎಂದು ಸೂಚನೆ ನೀಡಿದರು.

ಹಳೆ ರೌಡಿಗಳ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಅವರು ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಬದುಕು ನಡೆಸುವಂತೆ ಮಾಡಬೇಕು. ಹಫ್ತಾ ವಸೂಲಿ ಮಾಡುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರೊಂದಿಗೆ ಉತ್ತಮ ರೀತಿಯನ್ನು ಪೊಲೀಸರು ನಡೆದುಕೊಳ್ಳಬೇಕು. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರನ್ನು ಗೌರವಯುತವಾಗಿ ನಡೆಸಿಕೊಂಡು ಅವರ ದೂರುಗಳನ್ನು ದಾಖಲಿಸಿಕೊಳ್ಳಬೇಕು. ನಮ್ಮ ಠಾಣಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ದೂರುದಾರರು ಮತ್ತು ಸಾರ್ವಜನಿಕರನ್ನು ಅಲೆದಾಡಿಸುವುದು ಸರಿಯಲ್ಲ ಎಂದು ಹೇಳಿದರು.

ಮಾಜಿ ಉಪ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ ಪ್ರಕರಣವನ್ನು ಪ್ರಸ್ತಾಪಿಸಿದ ಡಾ.ಪಿ.ಪರಮೇಶ್ವರ್, ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಆಯುಕ್ತರಿಗೆ ಸೂಚಿಸಿದರು. ಪೆÇಲೀಸ್ ಅಧಿಕಾರಿಗಳೇ ಕಾನೂನು ಉಲ್ಲಂಘಿಸಿ ಸಾರ್ವಜನಿಕರನ್ನು ಬೆದರಿಸುವ, ಲಂಚ ಸ್ವೀಕರಿಸುವ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಇಂತಹವರನ್ನು ಮುಲಾಜಿಲ್ಲದೆ ಕೆಲಸದಿಂದ ಅಮಾನತು ಮಾಡಲಾಗುವುದು. ಇಲಾಖೆಗೆ ಕೆಟ್ಟ ಹೆಸರು ತರುವ ಇಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಅವರು ಸೂಚನೆ ನೀಡಿದರು.

ಗೌರಿ-ಗಣೇಶ ಹಾಗು ಮೊಹರ್ರಂ ಹಬ್ಬಗಳು ಬರುತ್ತಿವೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಬೇಕು ಹಾಗೂ ಸ್ಥಳೀಯ ಮಟ್ಟದಲ್ಲಿ ಶಾಂತಿಸಭೆ ನಡೆಸಬೇಕು ಎಂದು ಉಪಮುಖ್ಯಮಂತ್ರಿಗಳು ಆದೇಶಿಸಿದರು.  ರಿಯಲ್ ಎಸ್ಟೇಟ್ ಏಜೆಂಟ್, ಉದ್ಯಮಿಗಳ ಸ್ನೇಹ ಇಟ್ಟುಕೊಳ್ಳಬಾರದು. ಅವರ ಜತೆ ಸೇರಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗಬಾರದು. ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದು ಎಂದು ಪರಮೇಶ್ವರ್ ಆದೇಶಿಸಿದರು.  ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ , ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು, ಎಲ್ಲಾ ವಿಭಾಗದ ಡಿಸಿಪಿಗಳು ಮತ್ತು ಎಸಿಪಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin