ಅಪಹರಣಕಾರನಿಗೆ ಗುಂಡೇಟು, ಪೋಷಕರ ಮಡಿಲು ಸೇರಿದ ಬಾಲಕ

ಈ ಸುದ್ದಿಯನ್ನು ಶೇರ್ ಮಾಡಿ

Shootout--01

ಬೆಂಗಳೂರು, ಜ.30-ನಗರದಲ್ಲಿ ಐದು ವರ್ಷದ ಬಾಲಕನ ಅಪಹರಿಸಿ 35 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರನ ಕಾಲಿಗೆ ಗುಂಡು ಹಾರಿಸಿ ಮಗುವನ್ನು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜುನಾಥ ನಗರದ ಅಭಿಷೇಕ್(23), ಕಸ್ತೂರ್‍ಬಾನಗರದ ದಿವ್ಯತೇಜ(22), ಹರ್ಷಿತ್ (18) ಮತ್ತು ಚಾಮರಾಜಪೇಟೆಯ ವಿಠಲ್‍ನಗರ ಶ್ರೀಕಾಂತ್(19) ಬಂಧಿತ ಅಪಹರಣಕಾರರು.  ರಾಜೇಶ್ ಎಂಬುವರು ಜ.28ರಂದು ಮಧ್ಯಾಹ್ನ ಕೆ.ಪಿ.ಅಗ್ರಹಾರ ಠಾಣೆಗೆ ತೆರಳಿ ತಮ್ಮ ಮಗು ಚಂದನ್(5)ನನ್ನು ಬೈಕ್‍ನಲ್ಲಿ ಅಪರಿಚಿತರಿಬ್ಬರು ಬಂದು ಅಪಹರಿಸಿದ್ದಾರೆಂದು ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯ ಪ್ರವೃತ್ತರಾದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಅಪಹರಣಕಾರರ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿದ್ದರು.

ತನಿಖೆ ವೇಳೆ ಅಪಹರಣಕಾರರು ಇರುವ ಬಗ್ಗೆ ಖಚಿತ ಮಾಹಿತಿ ಹಾಗೂ ತಾಂತ್ರಿಕ ವಿಶ್ಲೇಷಣೆಯಿಂದ ಬಾಲಕನ ಪೊೀಷಕರ ಜೊತೆಯಲ್ಲಿದ್ದ ಅಭಿಷೇಕ್ ಮೇಲೆಯೇ ಅನುಮಾನ ವ್ಯಕ್ತವಾಗಿದ್ದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಪಡಿಸಿದ್ದಾರೆ. ಈ ವೇಳೆ ಅಭಿಷೇಕ್ ಅಪಹರಣಕಾರರ ಬಗ್ಗೆ ಬಾಯ್ಬಿಟ್ಟು, ಅವರು ಇರುವ ಜಾಗವನ್ನು ಹೇಳಿದ್ದಾನೆ. ಈತನ ಹೇಳಿಕೆ ಮೇರೆಗೆ ಕೆಂಗೇರಿ ವ್ಯಾಪ್ತಿಯ ಕೊಮ್ಮಘಟ್ಟ ರಸ್ತೆಯ ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಸ್ಯಾಂಟ್ರೋಕಾರಿನಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದೆ.

ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಕಾರನ್ನು ಸುತ್ತುವರಿದಾಗ ಚಾಲಕನ ಸೀಟಿನಲ್ಲಿದ್ದ ಅಪಹರಣಕಾರ ದಿವ್ಯತೇಜ ಕಾರಿನಿಂದ ಇಳಿದು ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಕೆ.ಪಿ.ಅಗ್ರಹಾರ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್ ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಗುಂಡು ಆರೋಪಿ ದಿವ್ಯತೇಜನ ಬಲಗಾಲಿಗೆ ಹೊಕ್ಕಿದ ಪರಿಣಾಮ ಆತ ಕುಸಿದು ಬಿದ್ದಿದ್ದಾನೆ.

ತಕ್ಷಣ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಕಾರಿನಲ್ಲಿದ್ದ ಇನ್ನುಳಿದ ಅಪಹರಣಕಾರರಾದ ಶ್ರೀಕಾಂತ್, ಹರ್ಷಿತ್‍ನನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆಯಿಂದ ತಿಳಿದು ಬರಬೇಕಿದೆ.
ಅಪಹರಣಕಾರರಿಂದ ಬಾಲಕನನ್ನು ರಕ್ಷಿಸಿದ ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿ ನಂತರ ಪೋಷಕರಿಗೆ ಒಪ್ಪಿಸಿದ್ದಾರೆ.
ಪ್ರಮುಖ ಅಪಹರಣಕಾರನಾದ ದಿವ್ಯತೇಜನ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ಎರಡು ಕೊಲೆಯತ್ನ ಪ್ರಕರಣ ಹಾಗೂ ಇನ್ನಿತರೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.

Facebook Comments

Sri Raghav

Admin