ಅಬುಧಾಬಿ ಆಸ್ಪತ್ರೆಗೆ ದಾಖಲಾದ ತೂಕದ ಮಹಿಳೆ ಇಮಾನ್
ದುಬೈ, ಮೇ 5-ವಿಶ್ವದ ಅತಿ ತೂಕದ ಮಹಿಳೆ ಎಂದೇ ಹೇಳಲಾಗಿದ್ದ 500 ಕೆಜಿ ತೂಕವಿದ್ದ ಈಜಿಪ್ಟ್ ನ ಇಮಾನ್ ಅಹಮದ್(37) ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಚಿಕಿತ್ಸೆಗಾಗಿ ಅಬುಧಾಬಿಯ ಆಸ್ಪತ್ರೆಯೊಂದಕ್ಕೆ ಇಂದು ದಾಖಲಾಗಿದ್ದಾರೆ. ಈಗ 176 ಕೆಜಿ ತೂಕ ಇರುವ ಅವರಿಗೆ ಒಂದು ವರ್ಷ ಕಾಲ ಮುಂದಿನ ಹಂತದ ಚಿಕಿತ್ಸೆ ನೀಡಲಾಗುತ್ತದೆ. ಸತತ ಮೂರು ತಿಂಗಳ ಚಿಕಿತ್ಸೆ ಬಳಿಕ 328 ಕಿಲೋ ತೂಕ ಕಳೆದುಕೊಂಡ ಇಮಾನ್ ಹೆಚ್ಚಿನ ಚಿಕಿತ್ಸೆಗಾಗಿ ಸರಕು ಸಾಗಣೆ (ಕಾರ್ಗೊ) ವಿಮಾನದಲ್ಲಿ ನಿನ್ನೆ ಅಬುಧಾಬಿಗೆ ತೆರಳಿದ್ದರು. ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಅವರ ಆರೋಗ್ಯ ಸ್ಥಿತಿ ಪರಿಶೀಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಬುಧಾಬಿಯ ವಿಪಿಎಸ್ ಬುರ್ಜಿಲ್ ಆಸ್ಪತ್ರೆಗೆ ಕರೆದೊಯ್ಯುವುದಾಗಿ ವೈದ್ಯರು ಹೇಳಿದ್ದರು.
ಭಾರತದಿಂದ ಆರು ಗಂಟೆ ಪ್ರಯಾಣದ ನಂತರ ಇಮಾನ್ ಅಬುಧಾಬಿ ತಲುಪಿದ್ದಾರೆ. ಅವರೊಂದಿಗೆ ಆಸ್ಪತೆಯ 9 ವೈದ್ಯರ ತಂಡವೂ ತೆರಳಿದೆ. ಭಾರತದಲ್ಲಿ ಚಿಕಿತ್ಸೆ ನಡೆಸುವುದಕ್ಕೂ ಮುನ್ನ ಅವರ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ದೇಹ ಊದಿಕೊಂಡಿತ್ತು. ಶರೀರದ ಗ್ರಂಥಿಗಳಲ್ಲಿನ ತೊಂದರೆಯಿಂದಾಗಿ ತೂಕ ವಿಪರೀತ ಏರಿಕೆಯಾಗಿತ್ತು ಎಂದು ವೈದ್ಯರು ತಿಳಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS