‘ಅಬ್ಬೆ ತುಮಕೂರ ಸಿದ್ದಪುರುಷ ವಿಶ್ವಾರಾಧ್ಯರು’ ಮೂಲಕ ಸಾಯಿಪ್ರಕಾಶ್‍ರ ಭಕ್ತಿ ಗೀತೆಗಳ ಗಾನ

ಈ ಸುದ್ದಿಯನ್ನು ಶೇರ್ ಮಾಡಿ

vishwaradhya-1

ಬೆಳ್ಳಿ ತೆರೆಯ ಮೇಲೆ ಹಾಗೊಮ್ಮೆ ಹೀಗೊಮ್ಮೆ ಭಕ್ತಿ ಪ್ರಧಾನ ಚಿತ್ರಗಳು ಬರುವ ಮೂಲಕ ಒಂದಷ್ಟು ಸಿದ್ದ ಪುರುಷರ ವಿಚಾರವೂ ಪ್ರೇಕ್ಷಕರ ಮನವನ್ನು ಮುಟ್ಟುತ್ತದೆ. ಆ ನಿಟ್ಟಿನಲ್ಲಿ ತುಮಕೂರಿನ ಸಿದ್ದಪುರುಷರಾದ ವಿಶ್ವಾರಾಧ್ಯರ ಕುರಿತು ಚಿತ್ರವೊಂದು ಸಿದ್ಧವಾಗಿದ್ದು , ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಬಹಳ ಅದ್ಧೂರಿಯಾಗಿ ನಗರದಲ್ಲಿ ನೆರವೇರಿತು. ಅಬ್ಬೆ ತುಮಕೂರ ಎನ್ನುವ ಸ್ಥಳವು ಯಾದಗಿರಿ ಜಿಲ್ಲೆಯಲ್ಲಿದ್ದು, ಎಲ್ಲಿಯೋ ಬೆಳೆದು ನಿಷ್ಪತ್ತಗೊಂಡ ಮಹಾತ್ಮರು ಅಂತಿಮ ದಿನಗಳನ್ನು ಇದೇ ಜಾಗದಲ್ಲಿ ಕಳೆದರಿಂದ ಅದು ಅವಿಮುಕ್ತ ಕ್ಷೇತ್ರವಾಗಿ ಕರ್ನಾಟಕ, ಮಹಾರಾಷ್ಟ್ರಗಳಿಂದ ಭಕ್ತಾದಿಗಳು ಬರುತ್ತಿರುವಂತಹ ಕ್ಷೇತ್ರವಾಗಿದೆಯಂತೆ.

ಭಕ್ತಿ ಚಿತ್ರಗಳಿಗೆ ಹೆಸರಾದ ಸಾಯಿಪ್ರಕಾಶ್‍ರವರು ಈ `ಅಬ್ಬೆ ತುಮಕೂರ ಸಿದ್ದಪುರುಷ ವಿಶ್ವಾರಾಧ್ಯರು’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಶ್ವಾರಾಧ್ಯರ ಪಾತ್ರದಲ್ಲಿ ರಾಮ್‍ಕುಮಾರ್ ಗ್ಯಾಪ್ ನಂತರ ನಟಿಸಿದ್ದಾರೆ. ಪತ್ನಿಯಾಗಿ ಶೃತಿ, ತಮ್ಮನಾಗಿ ಹರೀಶ್‍ರಾಜ್ ಇವರಿಗೆ ಜೋಡಿಯಾಗಿ ದಿಶಾ ಪೂವಯ್ಯ ಉಳಿದಂತೆ ಸಾಧುಕೋಕಿಲ, ಕೀರ್ತಿರಾಜ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ರಮೇಶ್‍ಭಟ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಕತೆಗೆ ತಕ್ಕಂತೆ ಸನ್ನಿವೇಶಕ್ಕೆ ಅನುಗುಣವಾಗಿ ಜವಾರಿ ಭಾಷೆಯನ್ನು ಬಳಸಲಾಗಿದ್ದು, ಅದರ ಜವಾಬ್ದಾರಿಯನ್ನು ಸುಭಾಷ್‍ಚಂದ್ರಕವಲಗಿ ವಹಿಸಿಕೊಂಡಿದ್ದಾರೆ. ಸ್ವಾಮಿಗಳ ವಿದ್ಯಾಭ್ಯಾಸ, ಯೌವ್ವನ, ಮದುವೆ, ವೃದ್ದಾಪ್ಯ ಇವುಗಳನ್ನು ತೋರಿ ಸುವ ಪ್ರಯತ್ನ ಮಾಡಲಾಗಿದೆ. ಶ್ರೀ ಚಂದ್ರರವರ ಸಾಹಿತ್ಯ, ಶ್ಲೋಕ ಸೇರಿದಂತೆ ಒಟ್ಟು 16 ಗೀತೆಗಳಿಗೆ ಬಿ.ಬಲರಾಮ್ ಸಂಗೀತ ಸಂಯೋಜಿಸಿದ್ದಾರೆ. ಮಠಾಧೀಕ್ಷರಾದ ಶ್ರೀ ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳು ಮತ್ತು ವಿಶ್ವಗಂಗಾ ಗೆಳೆಯರ ಬಳಗವು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಟರಾದ ಪುನೀತ್‍ರಾಜ್‍ಕುಮಾರ್, ಜಗ್ಗೇಶ್, ಇತರರು ಹಾಜರಿದ್ದು , ಚಿತ್ರಕ್ಕೆ ಶುಭ ಕೋರಿದರು.

Facebook Comments

Sri Raghav

Admin