ಅಭಿಮಾನದ ಹೆಸರಿನಲ್ಲಿ ಕನ್ನಡಿಗರ ದರೋಡೆ ಮಾಡಲಿರುವ ಬಾಹುಬಲಿ-2

ಈ ಸುದ್ದಿಯನ್ನು ಶೇರ್ ಮಾಡಿ

Bahubali--2

ಬೆಂಗಳೂರು, ಏ.26-ಬಾಹುಬಲಿ-2 ಚಿತ್ರದ ಕಟ್ಟಪ್ಪ ಸತ್ಯರಾಜ್ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣ ಸುಖ್ಯಾಂತವಾಗಿ ಈ ವಾರ ಚಿತ್ರ ಬಿಡುಗಡೆಗೊಳ್ಳುತ್ತಿರುವ ನಡುವೆಯೇ ರಾಜ್ಯದಲ್ಲಿ ಮತ್ತೊಂದು ವಿವಾದ ಈ ಚಿತ್ರಕ್ಕೆ ಎದುರಾಗಿದೆ.  ಇದೇ ಶುಕ್ರವಾರ ಬಾಹುಬಲಿ-2 ಚಿತ್ರ ದೇಶಾದ್ಯಂತ ತೆರೆಕಾಣಲಿದ್ದು, ಆದರೆ ಕರ್ನಾಟಕದಲ್ಲಿ ಈ ಚಿತ್ರ ನೋಡಲು ಬಯಸುವವರು ಅನಗತ್ಯವಾಗಿ ಹಣ ಕಳೆದುಕೊಳ್ಳಬೇಕಾದ ಪ್ರಸಂಗ ಎದುರಾಗಿದೆ. ಮಲ್ಟಿಫ್ಲೆಕ್ಸ್‍ಗಳಲ್ಲಿ, ಸಾಮಾನ್ಯ ಚಿತ್ರಮಂದಿರಗಳಲ್ಲಿ ಬಾಹುಬಲಿ-2 ನೋಡಬೇಕಾದರೆ ಹೆಚ್ಚು ಹಣ ತೆರಬೇಕಾದ ಅನಿವಾರ್ಯತೆ ಎದುರಾಗಿದೆ.ಥಿಯೇಟರ್ ಮಾಲೀಕರು, ಮಲ್ಟಿಫ್ಲೆಕ್ಸ್‍ಗಳ ಆಡಳಿತ ಮಂಡಳಿಗಳು ಇದ್ದಕ್ಕಿದ್ದಂತೆ ಟಿಕೆಟ್ ದರವನ್ನು ದುಪ್ಪಟ್ಟುಗೊಳಿಸಿವೆ. ತೀವ್ರ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿರುವ ಬಾಹುಬಲಿ-2 ಚಿತ್ರವನ್ನು ವಿವಾದದ ನಡುವೆಯೂ ನೋಡಲು ಜನ ಕಾತುರರಾಗಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಚಿತ್ರಮಂದಿರಗಳು ಮತ್ತು ಮಲ್ಟಿಫ್ಲೆಕ್ಸ್‍ಗಳ ಮಾಲೀಕರು ದರವನ್ನು ಹೆಚ್ಚಿಸಿದ್ದಾರೆ.

ಮತ್ತೊಂದು ದುರಂತವೆಂದರೆ ಚಿತ್ರ ನಿರ್ಮಾಪಕರು, ನಿರ್ದೇಶಕರ ಕರ್ಮಭೂಮಿಯಾದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಾಹುಬಲಿ-2 ಚಿತ್ರದ ಟಿಕೆಟ್ ದರ ಕರ್ನಾಟಕಕ್ಕಿಂತ ಐದಾರು ಪಟ್ಟು ಕಡಿಮೆ ಇದೆ. ಆಂಧ್ರಪ್ರದೇಶದಲ್ಲಿ ಮಲ್ಟಿಫ್ಲೆಕ್ಸ್‍ನ ಟಿಕೆಟ್ ದರ 300ರಿಂದ 400 ರೂ.ಗಳಷ್ಟಿದೆ. ತಮಿಳುನಾಡಿನಲ್ಲಿ ಕ್ಲಬ್, ರಾಯಲ್ ಮತ್ತು ಗೋಲ್ಡ್ ಮೂರು ಕ್ಲಾಸ್‍ಗಳಲ್ಲೂ ಏಕರೀತಿ ದರ ನಿಗದಿಪಡಿಸಲಾಗಿದ್ದು, 120 ರೂ. ಗರಿಷ್ಠ ದರವಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇದು 500 ರಿಂದ 800ರೂ.ನಷ್ಟಿದೆ. ಇದು ವೀಕೆಂಡ್ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಆತಂಕ ಇದೆ.

ತಮಿಳುನಾಡು ಸರ್ಕಾರ ಮಲ್ಟಿಫ್ಲೆಕ್ಸ್‍ಗಳು ಮನಸೋ ಇಚ್ಛೆ ದರ ವಿಧಿಸುವುದಕ್ಕೆ ಕಡಿವಾಣ ಹಾಕಿದ್ದು, 120 ರೂ. ಕರಾರುವಾಕ್ಕು ದರವನ್ನು ನಿಗದಿಗೊಳಿಸಿದೆ.
ಕರ್ನಾಟಕ ಸರ್ಕಾರ ಕಳೆದ 3 ವರ್ಷಗಳಿಂದ ಮಲ್ಟಿಫ್ಲೆಕ್ಸ್‍ಗಳ ದರ ನಿಗದಿಗೆ ಪ್ರಯತ್ನಿಸುತ್ತಲೇ ಇದೆಯಾದರೂ ಯಶಸ್ವಿಯಾಗಿಲ್ಲ. ಕಳೆದ ಬಜೆಟ್‍ನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲ್ಟಿಫ್ಲೆಕ್ಸ್‍ಗಳ ಗರಿಷ್ಠ ದರವನ್ನು 200ರೂ.ಗಳಿಗೆ ನಿಗದಿ ಮಾಡಿದ್ದಾರೆ. ಆದರೆ ಇದಕ್ಕೆ ಥಿಯೇಟರ್ ಮಾಲೀಕರು ಕವಡೆ ಕಾಸಿನ ಬೆಲೆಯನ್ನೂ ನೀಡಿಲ್ಲ. ಅದರಲ್ಲೂ ಬಾಹುಬಲಿ-2ಯಂತಹ  ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯಾದರೆ ಅಭಿಮಾನಿಗಳನ್ನು ಸುಲಿಗೆ ಮಾಡಲು ಮಲ್ಟಿಫ್ಲೆಕ್ಸ್‍ಗಳು ಟೊಂಕ ಕಟ್ಟಿ ನಿಲ್ಲುತ್ತಿವೆ. ಬಾಹುಬಲಿ-2 ಚಿತ್ರ ನೋಡಬಯಸುವವರಿಗೆ ತಮಿಳುನಾಡು, ಆಂಧ್ರಪ್ರದೇಶಗಳಿಗಿಂತಲೂ ದುಬಾರಿ ಹಣ ನೀಡಿ ಚಿತ್ರ ನೋಡುವ ಸಂಕಟ ಎದುರಾಗಿದೆ.

ಬಾಹುಬಲಿ-2 ಚಿತ್ರ ಸತ್ಯರಾಜ್ ಅವರ ಹೇಳಿಕೆಯಿಂದ ತೀವ್ರ ವಿವಾದಕ್ಕೀಡಾಗಿ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಕನ್ನಡ ಸಂಘಟನೆಗಳುಪಟ್ಟು ಹಿಡಿದಿದ್ದವು. ಇದರಿಂದಾಗಿ ಕರ್ನಾಟಕದ ಹಂಚಿಕೆದಾರರು ಈ ಚಿತ್ರವನ್ನು ಖರೀದಿ ಮಾಡಲು ಮುಂದಾಗಿರಲಿಲ್ಲ. ಕೊನೆಗೂ ಸತ್ಯರಾಜ್ ಕ್ಷಮೆ ಕೇಳಿದ ನಂತರ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಜನರ ಅಭಿಮಾನವನ್ನೇ ಬಂಡವಾಳ ಮಾಡಿಕೊಂಡು ಹಣ ದೋಚುವ ಪ್ರಯತ್ನ ನಡೆಯುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin