ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ: ಬಿಜೆಪಿಗೆ ಪರಮೇಶ್ವರ್ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Paramewshwar--01

ಬೆಂಗಳೂರು, ಫೆ.23– ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸವಾಲು ಹಾಕಿದ್ದಾರೆ.  ನಗರದ ಫ್ರೀಡಂಪಾರ್ಕ್‍ನಲ್ಲಿಂದು ನಡೆದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ರಾಜಕೀಯ ವಿರೋಧಿ ನೀತಿ ಖಂಡಿಸಿ ನಡೆದ ಸತ್ಯಮೇವ ಜಯತೆ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಮೆರಿಕದ ಅಧ್ಯಕ್ಷ ಚುನಾವಣೆಗೂ ಮುನ್ನ ಈ ರೀತಿಯ ಒಂದು ಚರ್ಚೆ ನಡೆಯುತ್ತದೆ. ರಾಜಕೀಯ ಬಿಟ್ಟು ಇಂತಹ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಿ. ಸತ್ಯಾಸತ್ಯತೆ ಬಯಲಾಗಲಿದೆ ಎಂದು ಆಹ್ವಾನ ನೀಡಿದರು. ಸುಳ್ಳು ಹೇಳುತ್ತ ಕಾಲ ಕಳೆಯುವುದನ್ನು ಬಿಡಿ. ಬಾಯಿಗೆ ಬಂದಂತೆ ಜನರ ಬಳಿ ಮಾತನಾಡುವುದನ್ನು ಬಿಡಿ. ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಈ ಬಾರಿ 2 ಲಕ್ಷ ಕೋಟಿ ಅಂದಾಜಿನ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ 1 ಲಕ್ಷ ಕೋಟಿ ಬಜೆಟ್ ಮಂಡಿಸಿದ ಬಗ್ಗೆ ತಮ್ಮ ಸಾಧನೆಯನ್ನು ತಾವೇ ದೆಹಲಿಗೆ ಹೋಗಿ ಹೇಳಿಕೊಂಡಿದ್ದರು. ನಾವು ಹಾಗೆ ಸಾಧನೆಗಳನ್ನು ಹೇಳುತ್ತ ಕೂರುವುದಿಲ್ಲ ಎಂದು ಕಿಡಿಕಾರಿದರು.  ದೇಶದಲ್ಲಿ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಒಂದು ಸಾವಿರ ರೈತರು ಸಾವಿಗೆ ಶರಣಾಗಿದ್ದಾರೆ. ಆದರೆ, ಕೇಂದ್ರದಿಂದ ಒಂದು ದಮ್ಮಡಿ ಸಹ ಪರಿಹಾರ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin