ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು : ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

dr--sudhakr-mla

ಚಿಕ್ಕಬಳ್ಳಾಪುರ, ಅ.25-ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೇ ಪ್ರತಿಯೊಬ್ಬರು ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು. ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕೆಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು. ತಾಲೂಕಿನ ಅಣಕನೂರು ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯ ಆವರಣದಲ್ಲಿ ನಿರ್ಮಿಸಿರುವ 8 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಶುದ್ದೀಕರಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಪೋಲೀರೈಡ್‍ಯುಕ್ತ ನೀರನ್ನು ಕುಡಿಯುತ್ತಿರುವ ಈ ಭಾಗದಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ತಲಾ 7.5 ಲಕ್ಷ ರೂ ವೆಚ್ಚದಲ್ಲಿ ನೀರು ಶುದ್ದೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.ಜಿಲ್ಲೆಯ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಪ್ರಾರಂಭವಾಗಲಿದೆ. ತಾಲೂಕಿನ ಗೋಪಾಲಕೃಷ್ಣ ಅಮಾನಿಕೆರೆ ಹೂಳೆತ್ತಲು ಮತ್ತು ಪುನಶ್ಚೇತನಕ್ಕಾಗಿ 10 ಕೋಟಿ ರೂ ಮಂಜೂರಾಗಿದೆ. ಇನ್ನೂ ಆದಷ್ಟು ಬೇಗ 900 ಕೋಟಿ ರೂ ವೆಚ್ಚದ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದು ಹೇಳಿದರು.ಜನರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಇವುಗಳನ್ನು ನಾವು ಪ್ರಾಮಾಣಿಕವಾಗಿ ಬಗೆಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಟೀಕೆಗಳನ್ನು ಮಾಡಿಕೊಂಡು ಕಾಲಹರಣ ಮಾಡುವುದು ಬೇಡ ಎಂದು ಸಲಹೆ ನೀಡಿದರು.ಜಿ.ಪಂ.ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಸಿಗುವಂತಾಗಲೂ ಗ್ರಾಮ ಗ್ರಾಮಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲು 10 ಸಾವಿರ ರೂ ಅನುದಾನವನ್ನು ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.ಕೋಚಿಮುಲ್ ನಿರ್ದೇಶಕ ನಾಗರಾಜ್, ತಾ.ಪಂ.ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಸದಸ್ಯ ತಿರುಮಳಪ್ಪ, ಮಾಜಿ ಅಧ್ಯಕ್ಷ ಪಿ.ಎ.ಮೋಹನ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಗ್ರಾ.ಪಂ.ಅಧ್ಯಕ್ಷೆ ನಳಿನಾ, ಕೋಚಿಮುಲ್ ಶಿಬಿರ ಉಪವ್ಯವಸ್ಥಾಪಕ ಪಾಪೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin