ಅಮಿತ್ ಶಾರಿಂದ ಗುಜರಾತ್‍ನ ಕಾಂಗ್ರೆಸ್ ಶಾಸಕರಿಗೆ ತಲಾ 10 ಕೋಟಿ ರೂ. ಆಮಿಷ..!

ಈ ಸುದ್ದಿಯನ್ನು ಶೇರ್ ಮಾಡಿ

Amit-Shah

ಬೆಂಗಳೂರು, ಜು.30- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಗುಜರಾತ್‍ನ ನಮ್ಮ ಕಾಂಗ್ರೆಸ್ ಶಾಸಕರಿಗೆ ತಲಾ 10 ಕೋಟಿ ರೂ. ಆಮಿಷವೊಡ್ಡಿದ ಹಿನ್ನೆಲೆಯಲ್ಲಿ ಶಾಸಕರನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ಕರ್ನಾಟಕಕ್ಕೆ ಕರೆತರಬೇಕಾಯಿತು ಎಂದು ಎಐಸಿಸಿ ಮುಖಂಡ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ಶಾಸಕರು ಕರ್ನಾಟಕಕ್ಕೆ ಬಂದಿದ್ದಾರೆ. ಮೂವರು ಅನಿವಾರ್ಯ ಕಾರಣಗಳಿಂದ ಗುಜರಾತ್‍ನಲ್ಲೇ ಉಳಿದಿದ್ದಾರೆ.

ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ, ಗುಜರಾತ್‍ನ ಪ್ರಭಾವಿ ಮುಖಂಡ, ಅಲ್ಪ ಸಂಖ್ಯಾತರಾದ ಅಹಮ್ಮದ್ ಪಟೇಲ್ ಅವರನ್ನು ಸೋಲಿಸಬೇಕೆಂಬುದು ಅಮಿತ್ ಷಾ ಅವರ ಅಜೆಂಡಾ ಆಗಿದೆ. ಆ ಹಿನ್ನೆಲೆಯಲ್ಲಿ ಶಾಸಕರುಗಳನ್ನು ಖರೀದಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಪ್ರತಿಯೊಬ್ಬರಿಗೂ 10 ಕೋಟಿ ರೂ. ಆಮಿಷವೊಡ್ಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಕರ್ನಾಟಕಕ್ಕೆ ಬಂದಿದ್ದಾರೆ. ಚುನಾವಣಾ ಅಕ್ರಮ ಮಾಡಿ ಬಿಜೆಪಿ ರಾಜ್ಯಸಭಾ ಚುನಾವಣೆ ಗೆದ್ದಿದೆ. ಹೀಗಾಗಿ ನಾವು ನಮ್ಮ ಶಾಸಕರನ್ನು ಬೆಂಗಳೂರಿಗೆ ಬರಮಾಡಿಕೊಂಡಿದ್ದೇವೆ. ಯಾರನ್ನೂ ಬಂಧಿಸಿಟ್ಟಿಲ್ಲ. ಯಾವುದೇ ನಿರ್ಬಂಧ ವಿಧಿಸಿಲ್ಲ. ನಾನೂ ಎಲ್ಲ ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಬೆಳಗ್ಗೆ ಅವರೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ಸಂತಸದಲ್ಲಿದ್ದಾರೆ ಎಂದು ಹೇಳಿದರು.

ವಿನಾಕಾರಣ ಬಿಜೆಪಿಯವರು ಗೊಂದಲ ಸೃಷ್ಟಿಸುತ್ತಿದ್ದಾರೆ. ನಮ್ಮ ಎಲ್ಲ ಕಾಂಗ್ರೆಸ್ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ನಮ್ಮ ಅಭ್ಯರ್ಥಿ ಅಹಮ್ಮದ್ ಪಟೇಲ್ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಾತಿ ಒಡೆಯುತ್ತಿಲ್ಲ:

ಲಿಂಗಾಯತ ವೀರಶೈವ ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ಜಾತಿ ಒಡೆಯುತ್ತಿಲ್ಲ. ಹಾಗೆ ನೋಡಿದರೆ ಬಿಜೆಪಿಯವರೇ ಹಿಂದುಳಿದ ವರ್ಗಗಳ ಮೀಸಲು ವಿರೋಧಿಗಳು. ಕೇಂದ್ರ ಕಚೇರಿ ನಾಗಪುರದ ಪ್ರಮುಖರೆಲ್ಲರ ಸಿದ್ಧಾಂತ ಮೀಸಲಾತಿಗೆ ವಿರುದ್ಧವಾಗಿದೆ. ಕೇಂದ್ರ ಸಚಿವ ಅನಂತ್‍ಕುಮಾರ್ ಅವರೇ ಸ್ವತಃ ಮೀಸಲು ವಿರೋಧಿ ಎಂದು ಆರೋಪಿಸಿದರು.   ಕಾಂಗ್ರೆಸ್ ಪಕ್ಷ ಈಗಾಗಲೇ ಪದಾಧಿಕಾರಿಗಳ ಆಯ್ಕೆ ಮಾಡಿದ್ದು, ಶೇ.50ರಷ್ಟು ಮೀಸಲು ನೀಡಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಹರಿಪ್ರಸಾದ್ ಉತ್ತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin