ಅಮಿತ್ ಷಾರನ್ನು ಮೆಚ್ಚಿಸಲು ‘ಪ್ರತಾಪ’ ಪ್ರದರ್ಶನ : ಸಿದ್ದರಾಮಯ್ಯ ತಿರುಗೇಟು
ನವದೆಹಲಿ, ಡಿ.4- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಮೆಚ್ಚಿಸಲು ಸಂಸದ ಪ್ರತಾಪ್ಸಿಂಹ ಅವರು ಈ ರೀತಿ ಕಾನೂನು ಮೀರಿ ವರ್ತಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಮಾಡುವವರೇ ಕಾನೂನು ಉಲ್ಲಂಘಿಸುತ್ತಾರೆ. ಇಂತಹವರ ವಿರುದ್ಧ ಕ್ರಮ ಕೈಗೊಂಡರೆ ತಪ್ಪೇನು ಎಂದು ಅವರು ಪ್ರಶ್ನಿಸಿದ್ದಾರೆ. ಹುಣಸೂರಿನಲ್ಲಿ ಹನುಮಜಯಂತಿ ಸಂದರ್ಭದಲ್ಲಿ ಸಂಸದ ಪ್ರತಾಪ್ಸಿಂಹ ಅವರನ್ನು ಪೊಲೀಸರು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದರ ವಿರುದ್ಧ ಹಲವು ಜಾಮೀನು ರಹಿತ ಪ್ರಕರಣಗಳಿವೆ.
ಕಾನೂನು ಮಾಡುವವರೇ ಕಾನೂನು ಉಲ್ಲಂಘನೆ ಮಾಡಿದರೆ ಹೇಗೆ ಎಂದು ಹೇಳಿದರು. ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲು ಇವರು ಹೀಗೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ಮಾಡಬಾರದು. ಇದನ್ನು ಅವರ ಪಕ್ಷದ ಅಧ್ಯಕ್ಷರು ಕೂಡ ಒಪ್ಪುವುದಿಲ್ಲ ಎಂದು ತಿಳಿಸಿದರು.