ಅಮೆರಿಕದಲ್ಲಿ ನಿಲ್ಲದ ಜನಾಂಗೀಯ ಹಿಂಸೆ : ಸಿಖ್ ವ್ಯಕ್ತಿಗೆ ಗುಂಡೇಟು
ನ್ಯೂಯಾರ್ಕ್, ಮಾ.5-ಅಮೆರಿಕದಲ್ಲಿ ಭಾರತೀಯರ ವಿರುದ್ಧ ವರ್ಣದ್ವೇಷ ಮತ್ತಷ್ಟು ಉಲ್ಬಣಗೊಂಡಿದೆ. ಜನಾಂಗೀಯ ಹಗೆತನದ ದಳ್ಳುರಿಗೆ ಒಂದೇ ವಾರದಲ್ಲಿ ಇಬ್ಬರು ಕಗ್ಗೊಲೆಯಾದ ಘಟನೆಯಿಂದ ಭಾರತೀಯರು ತೀವ್ರ ಆತಂಕಕ್ಕೆ ಒಳಗಾಗಿರುವಾಗಲೇ, ವಾಷಿಂಗ್ಟನ್ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಿನ್ನ ದೇಶಕ್ಕೆ ಹೋಗು ಎಂದು ಅಬ್ಬರಿಸುತ್ತಾ ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ವಾಷಿಂಗ್ಟನ್ನಲ್ಲಿ ನಡೆದ ಈ ಘಟನೆಯಿಂದ ಸಿಖ್ ವ್ಯಕ್ತಿಗೆ ಗಾಯಗಳಾಗಿವೆ. ಹೈದರಾಬಾದ್ನ ಟೆಕ್ಕಿ ಶ್ರೀನಿವಾಸ್ ಕೂಚಿಭೊಟ್ಲಾ ಮತ್ತು ಭಾರತೀಯ ಮೂಲದ ವರ್ತಕ ಹರ್ಣೀಶ್ ಪಟೇಲ್ ಹತ್ಯೆ ಘಟನೆಗಳ ಹಿಂದೆಯೇ ನಡೆದಿರುವ ಈ ಕೊಲೆ ಯತ್ನದಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಮತ್ತಷ್ಟು ಭಯಭೀತರಾಗಿದ್ದಾರೆ.
ವಾಷಿಂಗ್ಟನ್ ರಾಜ್ಯದ ಕೆಂಟ್ ನಗರದ ತನ್ನ ಮನೆಯ ಹೊರಗೆ ಸಿಖ್ ವ್ಯಕ್ತಿಯು ನಿನ್ನೆ ವಾಹನವನ್ನು ದುರಸ್ತಿಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ ಅಪರಿಚಿತನೊಬ್ಬ ವಿನಾಕಾರಣ ಜಗಳ ತೆಗೆದಿದ್ದಾನೆ. ಈ ಸಂದರ್ಭದಲ್ಲಿ ದುಷ್ಕರ್ಮಿಯು ನೀನು ನಿನ್ನ ದೇಶಕ್ಕೆ ಹೋಗು, ಇಲ್ಲಿರಬೇಡ ಎಂದು ಅಬ್ಬರಿಸಿ ನಂತರ ಸಿಖ್ ವ್ಯಕ್ತಿಯ ತೋಳಿಗೆ ಗುಂಡು ಹಾರಿಸಿ ಪರಾರಿಯಾಗಿದ್ಧಾನೆ ಎಂದು ಕೆಂಟ್ ಪೆÇಲೀಸರು ತಿಳಿಸಿದ್ದಾರೆ. ಗಾಯಗೊಂಡ ಸಿಖ್ಗೆ ಚಿಕಿತ್ಸೆ ನೀಡಲಾಗಿದೆ. ಅಕ್ರಮಣಕಾರ ಆರು ಅಡಿ ಎತ್ತರದ ಬಿಳಿ ವ್ಯಕ್ತಿಯಾಗಿದ್ದು, ಅರ್ಧ ಮುಖವನ್ನು ಮಾಸ್ಕ್ನಿಂದ ಮುಚ್ಚಿಕೊಂಡಿದ್ದನು ಎಂದು ಗುಂಡೇಟಿಗೆ ಒಳಗಾದ ಸಂತ್ರಸ್ತ ವಿವರ ನೀಡಿದ್ದಾರೆ.
ಸಿಖ್ ಪ್ರಾಣಾಪಾಯಿಂದ ಪಾರಾಗಿದ್ದಾರೆ. ಈ ಘಟನೆಯನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುವುದಾಗಿ ಕೆಂಟ್ ಪೊಲೀಸ್ ಮುಖ್ಯಸ್ಥ ಕೆನ್ ಥಾಮಸ್ ಹೇಳಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಅಗತ್ಯವಾದರೆ ಎಫ್ಬಿಎ ಮತ್ತು ಇತರ ತನಿಖಾ ಸಂಸ್ಥೆಗಳ ನೆರವು ಪಡೆಯುವುದಾಗಿ ಅವರು ತಿಳಿಸಿದ್ದಾರೆ. ನ್ಯೂಯಾರ್ಕ್ನಲ್ಲಿ ನೆಲೆಸಿರುವ ಎಕ್ತಾ ಎಂಬ ಭಾರತೀಯ ಮೂಲದ ಯುವತಿ ಮೇಲೆ ರೈಲಿನಲ್ಲಿ ಆಫ್ರಿಕಾ ಮೂಲಕ ಅಮೆರಿಕ ಯುವಕನೊಬ್ಬ ಇಲ್ಲಿಂದ ತೊಲಗು ಎಂದು ಮೊನ್ನೆ ಅಬ್ಬರಿಸಿ ದೌರ್ಜನ್ಯ ಎಸಗಿದ್ದ. ಇನ್ನೊಂದು ಪ್ರಕರಣದಲ್ಲಿ ಭಾರತೀಯರೊಬ್ಬರ ಮನೆ ಮೇಲೆ ರಾತ್ರಿ ದಾಳಿ ನಡೆಸಿದ್ದ ದುಷ್ಕರ್ಮಿಗಳ ಗುಂಪೊಂದು ನಾಯಿಯ ಮಲ-ಮೂತ್ರಗಳನ್ನು ಎರಚಿ, ಗೋಡೆಯ ಮೇಲೆ ದೇಶ ಬಿಟ್ಟು ತೊಲಗುವಂತೆ ಬರೆದು ಪರಾರಿಯಾಗಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS