ಅಮೆರಿಕದಲ್ಲಿ ನಿಲ್ಲದ ಹೇಟ್ ಕ್ರೈಂ : ದುಷ್ಕರ್ಮಿ ಗುಂಡಿಗೆ ಕೇರಳ ವೈದ್ಯ ಬಲಿ
ಮಿಚಿಗನ್, ಮೇ 7- ಅಮೆರಿಕದಲ್ಲಿ ಜನಾಂಗೀಯ ದ್ವೇಷದ ದಾಳಿ ಪ್ರಕರಣಗಳು ಮುಂದುವರಿದಿದೆ. ಭಾರತೀಯ ಮೂಲದ ವೈದ್ಯ ರಾಕೇಶ್ ಕುಮಾರ್(55) ಅಮೆರಿಕದಲ್ಲಿ ಗುಂಡಿಗೆ ಬಲಿಯಾಗಿದ್ದಾರೆ. ಸ್ಯಾನ್ಜೋಸ್ನಲ್ಲಿ ಹಂತಕನ ಗುಂಡಿಗೆ ಮಂಗಳೂರು ಮೂಲದ ದಂಪತಿ ಬಲಿಯಾದ ಬೆನ್ನಲ್ಲೇ, ಕ್ಯಾಲಿಫೋರ್ನಿಯಾದ ಮೊಡೆಸ್ಟೊ ನಗರದಲ್ಲಿ ಅಪರಿಚಿತನ ಚೂರಿ ಇರಿತಕ್ಕೆ ಪಂಜಾಬ್ನ ಜಗ್ಜಿತ್ ಸಿಂಗ್ ಹತ್ಯೆಗೀಡಾಗಿದ್ದರು. ರಾಕೇಶ್ ಹತ್ಯೆಯೊಂದಿಗೆ ಕಳೆದ ಆರು ದಿನಗಳಲ್ಲಿ ಒಟ್ಟು ನಾಲ್ವರು ಭಾರತೀಯರು ಕಗ್ಗೊಲೆಯಾಗಿದ್ದಾರೆ. ಮಿಚಿಗನ್ನಲ್ಲಿ ರಾಕೇಶ್ ಅವರ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೇರಳ ಮೂಲದ ಇವರು ಅಮೆರಿಕದ ಹೆನ್ರಿ ಫೋರ್ಡ್ ಆಸ್ಪತ್ರೆಯ ಮೂತ್ರಕೋಶ ವಿಭಾಗದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಕೇಶ್ ಕುಟುಂಬದವರು ಯಾರೊಬ್ಬರ ಮೇಲೂ ಅನುಮಾನವಿಲ್ಲ. ಹೀಗಾಗಿ ಇದು ಜನಾಂಗೀಯ ದ್ವೇಷದ ದಾಳಿಯಾಗಿರಬಹುದು ಎಂದು ಶಂಕಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪಂಜಾಬ್ನ ಕಪುರ್ತಲಾ ಜಿಲ್ಲೆಯ ಜಗ್ಜಿತ್ ಸಿಂಗ್ (32) ಅವರನ್ನು ಸಿಗರೇಟ್ಗಾಗಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಕೊಂದು ಹಾಕಿದ್ದ. ಸ್ಯಾನ್ಜೋಸ್ನಲ್ಲಿ ಮಂಗಳೂರಿನ ನರೇನ್ ಪ್ರಭು ದಂಪತಿ ಮೇಲೆ ಅವರ ಪುತ್ರಿಯ ಮಾಜಿ ಗೆಳೆಯ ಗುಂಡು ಹಾರಿಸಿ ಕೊಂದಿದ್ದನು. ಈ ಕೃತ್ಯದ ನಂತರ ಹಂತಕ ಪೊಲೀಸ್ ಗುಂಡಿಗೆ ಬಲಿಯಾದ್ದ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS