ಅಮೆರಿಕದಲ್ಲಿ ಭಾರತೀಯ ಉದ್ಯಮಿ ಹತ್ಯೆ : ವಲಸಿಗರಲ್ಲಿ ಆತಂಕದ ಕಾರ್ಮೋಡ

ಈ ಸುದ್ದಿಯನ್ನು ಶೇರ್ ಮಾಡಿ

Indian--02

ನ್ಯೂಯಾರ್ಕ್, ಮಾ.4– ಹೈದರಾಬಾದ್ ಟೆಕ್ಕಿ ಶ್ರೀನಿವಾಸ್ ಕೂಚಿಭೊಟ್ಲಾ ಹತ್ಯೆ ಪ್ರಕರಣದಿಂದ ಭಾರತೀಯರು ದಿಗ್ಭ್ರಾಂತರಾಗಿರುವಾಗಲೇ, ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಅಮೆರಿಕದ ಸೌತ್ ಕರೋಲಿನಾದಲ್ಲಿ ನಡೆದಿದೆ. ಈ ವಾರದಲ್ಲಿ ನಡೆದಿರುವ ಎರಡನೆ ಭಾರತೀಯನ ಹತ್ಯೆ ಇದಾಗಿದೆ.  ಕಳೆದ ಒಂದು ವಾರದಲ್ಲಿ ನಡೆದ ಇಬ್ಬರು ಭಾರತೀಯರ ಹತ್ಯೆ ಪ್ರಕರಣದಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಮತ್ತಷ್ಟು ಅತಂಕಗೊಂಡು ಭಯಭೀತರಾಗಿದ್ದಾರೆ. ಹರ್ನಿಷ್ ಪಟೇಲ್ (43) ಶುಕ್ರವಾರ ತಮ್ಮ ಫ್ಯಾನ್ಸಿ ಶಾಪ್ ಮುಚ್ಚಿ ಲ್ಯಾನ್‍ಕ್ಯಾಸ್ಟರ್‍ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು. ಅವರ ಮನೆಯ ಮುಂದೆಯೇ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಕನ್ಸಾಸ್ ಬಾರ್‍ನಲ್ಲಿ ಫೆ.22ರಂದು ನಡೆದ ಶ್ರೀನಿವಾಸ್ ಹತ್ಯೆ ಪ್ರಕರಣವನ್ನು ಭಾರತ ತೀವ್ರವಾಗಿ ಖಂಡಿಸಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲು ಅಮೆರಿಕಕ್ಕೆ ಮನವಿ ಮಾಡಿತ್ತು.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಘಟನೆ ಖಂಡಿಸಿದ್ದರು. ಇದಾದ ಎರಡೇ ದಿನಗಳಲ್ಲಿ ಭಾರತೀಯ ಉದ್ಯಮಿ ಕೊಲೆ ನಡೆದಿರುವುದು ಅಲ್ಲಿನ ಅನಿವಾಸಿ ಭಾರತೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.  ಲ್ಯಾನ್‍ಕ್ಯಾಸ್ಟರ್‍ನ ಸ್ಥಳೀಯ ಅಧಿಕಾರಿಗಳು ಈ ಘಟನೆ ಬಗ್ಗೆ ತೀವ್ರ ತನಿಖೆ ಮುಂದುವರಿಸಿದ್ದಾರೆ.

ಇದರ ಹಿಂದೆ ಜನಾಂಗೀಯ ದ್ವೇಷದ ಉದ್ದೇಶವಿದೆಯೇ ಎಂಬುದು ತನಿಖೆ ನಂತರವೇ ತಿಳಿದುಬರಬೇಕಿದೆ. ಹಂತಕರ ಪತ್ತೆಗಾಗಿ ವ್ಯಾಪಕ ಬಲೆ ಬೀಸಲಾಗಿದೆ ಎಂದು ಕೌಂಟಿ ಷರೀಫ್‍ನ ಬೇರಿ ಪೈಲಿ ಹೇಳಿದ್ದಾರೆ.   ಅಮೆರಿಕದ ವಿವಿಧೆಡೆ ಜನಾಂಗೀಯ ದ್ವೇಷ ಭುಗಿಲೆದ್ದು, ಭಾರತೀಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳು ಮರುಕಳಿಸುತ್ತಿವೆ. ನ್ಯೂಯಾಕ್‍ನಲ್ಲಿ ನೆಲೆಸಿರುವ ಏಕ್ತಾ ಎಂಬ ಭಾರತೀಯ ಮಹಿಳೆಗೆ ರೈಲಿಯಲ್ಲಿ ಆಫ್ರಿಕಾ ಮೂಲಕ ಅಮೆರಿಕ ಯುವಕನೊಬ್ಬ ನಮ್ಮ ದೇಶದಿಂದ ತೊಲಗು ಎಂದು ಅಬ್ಬರಿಸಿ ಕಿರುಕುಳ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.ಇಂತಹ ಇನ್ನೂ ಜನಾಂಗೀಯ ದ್ವೇಷದ ಪ್ರಕರಣಗಳು ಅಮೆರಿಕದಲ್ಲಿ ಮುಂದುವರಿಯುತ್ತಲೇ ಇವೆ. ಈ ಕುರಿತಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಬಗ್ಗೆ ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin