ಅಮೆರಿಕದ ಅಧ್ಯಕ್ಷರಾಗಿ ಒಬಾಮ ವಿದಾಯ ಭಾಷಣ : ಪ್ರಜಾಸತ್ತೆ ರಕ್ಷಿಸಲು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Obama-01

ವಾಷಿಂಗ್ಟನ್, ಜ.11-ಜನಾಂಗೀಯ ಘರ್ಷಣೆ, ಅಸಮಾನತೆ ಮತ್ತು ಕಲುಷಿತಗೊಳ್ಳುತ್ತಿರುವ ರಾಜಕೀಯ ವ್ಯವಸ್ಥೆಗಳ ನಡುವೆ ದೇಶದ ಜನತೆ ಒಗ್ಗಟ್ಟಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸಿ ಉಳಿಸಿ ಬೆಳೆಸಬೇಕಾಗಿದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ರಾಷ್ಟರದ ಪ್ರಜೆಗಳಿಗೆ ಕರೆ ನೀಡಿದರು ಅಮೆರಿಕದ ಅಧ್ಯಕ್ಷರಾಗಿ ಎಂಟು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ತವರು ನೆಲ ಚಿಕಾಗೊದಲ್ಲಿ ಇಂದು ತಮ್ಮ ವಿದಾಯ ಭಾಷಣ ಮಾಡಿದ ಒಬಾಮ, ಬಾಹ್ಯಶಕ್ತಿಗಳ ಕಡೆಯಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಪಾಯ ಸಂಭವಿಸುವ ಆತಂಕವಿರುವುದರಿಂದ ಎಲ್ಲರೂ ಒಂದುಗೂಡಿ ನಮ್ಮ ಅಮೂಲ್ಯ ಆಸ್ತಿಯಾಗಿರುವ ಪ್ರಜಾತಂತ್ರವನ್ನು ಜತನದಿಂದ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಜನತೆಯಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.

ಕಳೆದ ಎಂಟು ವರ್ಷಗಳಲ್ಲಿ ನೀವೆಲ್ಲರೂ ಅತ್ಯಂತ ಪ್ರೀತಿಯಿಂದ ನನ್ನೊಂದಿಗಿದ್ದು ನನ್ನೆಲ್ಲಾ ಅಭಿವೃದ್ದಿ ಕಾರ್ಯಗಳಿಗೂ ಶ್ರೀರಕ್ಷೆಯಾಗಿ ನಿಂತು ಬೆಂಬಲಿಸಿದ್ದೀರಿ. ನಿಮ್ಮ ಅಮೂಲ್ಯ ಸಹಕಾರದಿಂದ ನನಗೆ ನನ್ನ ಯೋಜನೆಗಳನ್ನೆಲ್ಲಾ ಪೂರ್ಣಗೊಳಿಸಲು ಶಕ್ತಿ ನೀಡಿದ್ದೀರಿ.ಇನ್ನು ಮುಂದೆಯೂ ಅದೇ ರೀತಿ ದೇಶದ ಉತ್ತಮ ಭವಿಷ್ಯಕ್ಕಾಗಿ ನೀವೆಲ್ಲ ಬೆಂಬಲ ನೀಡಬೇಕು ಎಂದು ಅವರು ಪುನರುಚ್ಚರಿಸಿದರು.  ನಾನು ಚುನಾವಣೆಯಲ್ಲಿ ಗೆದ್ದು ಅಮೆರಿಕ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂಧರ್ಭದಲ್ಲಿ ಜನಾಂಗೀಯ ಭಾವನೆಗಳನ್ನು ಕುರಿತಂತೆ ಮಾತುಗಳು ಕೇಳಿ ಬಂದಿದ್ದವು. ಆದರೆ ನಂತರದ ದಿನಗಳಲ್ಲಿ ಅದೆಲ್ಲವೂ ಅಪ್ರಸ್ತುತವಾಯಿತು. ದೇಶದ ಜನಜತೆಯ ಹಿತರಕ್ಷಣೆಯೊಂದೇ ಎಲ್ಲರ ಮಂತ್ರವಾಯಿತು. ಒಬ್ಬ ಸಾಮಾನ್ಯ ಮನುಷ್ಯನೂ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತರಬಹುದು ಎಂಬುದು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದ ಎಲ್ಲರಿಗೂ ವೇದ್ಯವಾಗುತ್ತದೆ ಎಂದು ಅವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ಇದೇ ಜನವರಿ 20ರಂದು ಬರಾಕ್ ಒಬಾಮ ಅವರ ಅಧಿಕಾರಾವಧಿ ಮುಗಿಯಲಿದ್ದು ನೂತನವಾಗಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿರುವ ವರ್ಣರಂಜಿತ ಹಾಗೂ ವಿವಾದಿತ ವ್ಯಕ್ತಿ ಎಂದೇ ಹೆಸರಾಗಿರುವ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಹೊಸ ಅಧ್ಯಕ್ಷರಾಗಿ ವಿಶ್ವದ ಹಿರಿಯಣ್ಣನ ಸಾರಥ್ಯ ವಹಿಸಲಿದ್ದಾರೆ. ಇಸ್ಲಾಮ್ ಧರ್ಮೀಯರು ಭಯೋತ್ಪಾದಕರು ಎಂಬಂತೆ ಬಿಂಬಿಸುವುದು ಅಥವಾ ಅವರು ಉಗ್ರರು ಎಂಬ ದೃಷ್ಟಿಯಿಂದ ನೋಡಿ ತಾರತಮ್ಯ ಮಾಡುವುದನ್ನು ನಿರಾಕರಿಸಿದ ಒಬಾಮ, ಅವರೂ ನಮ್ಮಂತೆಯೇ ರಾಷ್ಟ್ರಪ್ರೇಮಿಗಳಿದ್ದಾರೆ ಎಂದು ಹೇಳಿದಾಗ ನೆರೆದಿದ್ದ ಸಾವಿರಾರು ಮಂದಿ ಜಯಕಾರ ಹಾಕಿ ಸ್ವಾಗತಿಸಿದರು.

ನನ್ನ ಅಧಿಕಾರದುದ್ದಕ್ಕೂ ನಾನು ಭಯೋತ್ಪಾದನೆಯ ವಿರುದ್ಧ ಸಾಕಷ್ಟು ಹೋರಾಡಿದ್ದೇನೆ. ದೇಶದ ಜನತೆಯ ಉತ್ತಮ ಬದುಕಿಗಾಗಿ, ದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸಿದ್ದೇನೆ. ಅದು ಸಾಕಷ್ಟು ಫಲವನ್ನೂ ನೀಡಿದೆ. ಅಮೆರಿಕನ್ನರು ನಿರ್ಭಯವಾಗಿ ಜೀವನ ಸಾಗಿಸಿದ್ದಾರೆ. ನಾಗರಿಕರ ಹಕ್ಕುಗಳನ್ನು ಪ್ರಾಮಾಣಿಕವಾಗಿ ರಕ್ಷಿಸಿ ಭದ್ರತೆಯನ್ನು ಒದಗಿಸಿಕೊಡಲಾಗಿದೆ. ಹಾಗಾಗಿಯೇ ನಾನು ಮುಸಲ್ಮಾನ ಜನಾಂಗದವರ ವಿರುದ್ಧ ತಾರತಮ್ಯ ತಾರಿಸಲು ಅಥವಾ ಅವರನ್ನು ದವೇಷಿಸಲು ಇಷ್ಟಪಡುವುದಿಲ್ಲ ಎಂದು ಒಬಾಮ ಹೇಳಿದರು.ಆದರೆ ನಾವು ಜಾಗತಿಕ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದೇವೆ. ಮಾನವ ಹಕ್ಕುಗಳ ರಕ್ಷಣೆ, ಉತ್ತಮ ಮತ್ತು ನೆಮ್ಮದಿಯ ಜೀವನವನ್ನು ಎಲ್ಲರಿಗೂ ಖಾತ್ರಿಪಡಿಸುವುದು ನಮ್ಮ ಆದ್ಯತೆಯಾಗಿರಬೇಕು. ಅದೇ ರೀತಿಯಲ್ಲೇ ನಾನು ಆಡಳಿತ ನಡೆಸಿದ್ದೇನೆ ಎಂದು ಜನರ ಜಯಕಠಾರಗಳ ಮಧ್ಯೆ ಹೇಳಿದರು.

ನನ್ನ ಮುಂದಿನ ಜೀವಿತದ ದಿನಗಳನ್ನು ಅಮೆರಿಕದ ಒಬ್ಬ ಸಾಮಾನ್ಯ ಪ್ರಜೆಯಾಗಿ ನಿಮ್ಮೊಂದಿಗೆ ಕಳೆಯುವುದು ನನ್ನ ಆಸೆಯಾಗಿದೆ. ನಮ್ಮ ಸರ್ಕಾರ ಅಥವಾ ಸಾಂವಿಧಾನಿಕ ಸಂಸ್ಥೆಗಳಲ್ಲಿ ನಂಬಿಕೆ ಕಳೆದುಕೊಂಡಾಗ, ಹಣವೇ ಪ್ರಧಾನವಾದಾಗ ಬದುಕು ದುರ್ಭರವಾಗುತ್ತದೆ. ಮಾನವೀಯತೆಗೆ ಧಕ್ಕೆ ಉಂಟಾಗುತ್ತದೆ. ಪ್ರತಿಯೊಬ್ಬರಲ್ಲೂ ರಾಷ್ಟ್ರಪ್ರೇಮ ಸ್ಫುರಿಸಬೇಕು. ಅದು ಪ್ರತಿ ನಾಗರಿಕನ ಬಾಧ್ಯತೆ ಎಂದರು. ದೇಶದಲ್ಲಿ ಇದುವರೆಗೆ ಆಗಿರುವ ಪ್ರಗತಿಯಲ್ಲಿ ನನ್ನದೇನೂ ಇಲ್ಲ. ಅದೆಲ್ಲವೂ ನಿಮ್ಮ, ಪ್ರಜೆಗಳ ಯಶಸ್ಸು ಎಂಬುದು ನನ್ನ ಭಾವನೆಯಾಗಿದೆ ಎಂದು ಒಬಾಮಾ ತಿಳಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin