ಅಮೆರಿಕ ಅಧ್ಯಕ್ಷ ಟ್ರಂಪ್’ರನ್ನು ಹಿಟ್ಲರ್ ಗೆ ಹೋಲಿಸಿದ ಪೋಪ್ ಫ್ರಾನ್ಸಿಸ್

ಈ ಸುದ್ದಿಯನ್ನು ಶೇರ್ ಮಾಡಿ

Pope-Trump

ವ್ಯಾಟಿಕನ್ ಸಿಟಿ, ಜ.23- ವಿದೇಶಿಯರು ಮತ್ತು ವಲಸಿಗರನ್ನು ತಡೆಯಲು ಗೋಡೆಗಳನ್ನು ನಿರ್ಮಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿಂತನೆಯನ್ನು ಕ್ಯಾಥೋಲಿಕ್ ಕ್ರೈಸ್ತರ ಧರ್ಮಗುರು ಪೋಪ್ ಫ್ರಾನ್ಸಿಸ್ ಖಂಡಿಸಿದ್ದಾರೆ. ಯಾವ ವ್ಯಕ್ತಿಯು ಸೇತುವೆಯ ಬದಲಿಗೆ ಗೋಡೆ ನಿರ್ಮಿಸಲು ಯೋಚಿಸುತ್ತಾನೋ ಆತ ಕ್ರೈಸ್ತನೇ ಅಲ್ಲ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಅಲ್ಲದೆ ಅಮೆರಿಕ ರಾಷ್ಟ್ರೀಯ ಚುನಾವಣೆಯಲ್ಲಿ ಟ್ರಂಪ್ ಜಯವನ್ನು 1933ರಲ್ಲಿ ಜರ್ಮನಿಯಲ್ಲಿ ಕ್ರೂರ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆಲುವಿಗೆ ಪೋಪ್ ಹೋಲಿಸಿದ್ದಾರೆ.

ಜರ್ಮನಿಯು ಅರಾಜಕತೆಗೆ ಸಿಲುಕಿದ್ದ ಸಂದರ್ಭದಲ್ಲಿ ತನ್ನ ಅಸ್ತಿತ್ವವನ್ನು ಮರಳಿ ದಕ್ಕಿಸಿಕೊಡುವ ನಾಯಕನಿಗಾಗಿ ಎದುರು ನೋಡುತ್ತಿತ್ತು. ಆಗ ಆ ದೇಶದ ಜನರಿಗೆ ನಾನು ಅದನ್ನು ಸಾಧಿಸಬಲ್ಲೆ ಎಂದು ಸಾರಿದ ಹಿಟ್ಲರ್ ಎಂಬಾತ ಸಿಕ್ಕಿದ. ಹಿಟ್ಲರ್ ಬಲವಂತವಾಗಿ ಅಧಿಕಾರವನ್ನು ಕಸಿದುಕೊಳ್ಳಲಿಲ್ಲ. ಆದರೆ, ಜನರೇ ಆತನನ್ನು ಉತ್ತಮ ನಾಯಕನೆಂದು ಆಯ್ಕೆ ಮಾಡಿದರು. ಆನಂತರ ಆತ ತನ್ನ ಜನರನ್ನೇ ನಾಶ ಮಾಡಿದ ಎಂದು ಪೋಪ್ ಸಮೀಕರಿಸಿದ್ದಾರೆ.  ಸ್ಪೇನ್ ದಿನಪತ್ರಿಕೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಆ ಸಮಯದಲ್ಲಿ ಜರ್ಮನ್ನರು ಸಹ ಅನ್ಯ ದೇಶದವರು ತಮ್ಮ ಅಸ್ತಿತ್ವವನ್ನು ಕಿತ್ತುಕೊಳ್ಳಬಾರದು ಎಂಬ ಆತಂಕದಿಂದ ಗೋಡೆಗಳು ಮತ್ತು ತಂತಿಬೇಲಿಗಳನ್ನು ನಿರ್ಮಿಸಿದ್ದರು. ಹಿಟ್ಲರ್ ಜರ್ಮನಿಗೆ ವಿಕೃತ ರೂಪ ತೋರಿಸಿದ. ಆನಂತರ ಪರಿಸ್ಥಿತಿ ಏನಾಯಿತು, ಹಿಟ್ಲರ್ ಏನಾದ ಎಂಬುದು ನಿಮಗೆಲ್ಲಾ ಚೆನ್ನಾಗಿ ಗೊತ್ತಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ಜನರನ್ನು ಓಲೈಸುವ ನೀತಿ ಅಪಾಯಕಾರಿ. ಜನತೆಯನ್ನು ಮರುಳು ಮಾಡುವ ರಾಜಕೀಯವು ಹಿಟ್ಲರ್‍ನಂಥ ಸರ್ವಾಧಿಕಾರಿಯ ಆಯ್ಕೆಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದ ಅವರು ಟ್ರಂಪ್ ವಿವಾದಾತ್ಮಕ ನೀತಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಆತ ಏನು ಮಾಡುತ್ತಾನೆ ಎಂಬುದನ್ನು ಕಾದು ನೋಡೋಣ, ಅನಂತರ ಮೌಲ್ಯಮಾಪನ ಮಾಡೋಣ ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin