ಅಮೇರಿಕಾದಲ್ಲಿ ನೆಲಸಿರುವ ಭಾರತೀಯರಿಗೆ ಕಂಟಕವಾದ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump-India

ವಾಷಿಂಗ್ಟನ್,ಫೆ.22- ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ವಿವಾದಾತ್ಮಕ ನೀತಿಗಳನ್ನು ಜಾರಿಗೊಳಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರ ಹೊಸ ನಿರ್ಧಾರವೊಂದು ಅಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.   ಸಂಚಾರಿ ನಿಯಮ ಉಲ್ಲಂಘನೆಗಾಗಿ ಬಂಧನಕ್ಕೊಳಗಾಗುವುದು ಸೇರಿದಂತೆ ಸಣ್ಣಪುಟ್ಟ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರೆ ಅವರನ್ನು ದೇಶದಿಂದಲೇ ಗಡಿಪಾರು ಮಾಡುವ ಕಠಿಣ ಕ್ರಮದ ಬಗ್ಗೆ ಹೊಸ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಭಾರತೀಯರು ಸೇರಿದಂತೆ ಲಕ್ಷಾಂತರ ಮಂದಿ ಅಮೆರಿಕದಿಂದ ಹೊರಬೀಳುವ ಆತಂಕಕ್ಕೆ ಒಳಗಾಗಿದ್ದಾರೆ.

ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವವರೂ ಸೇರಿದಂತೆ ಸಣ್ಣಪುಟ್ಟ ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗುವ ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲು ನಿನ್ನೆ ಟ್ರಂಪ್ ಪ್ರಕಟಿಸಿದ ಹೊಸ ವಲಸೆ ಜಾರಿ ನೀತಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.   ಅಂಗಡಿಗಳಲ್ಲಿ ಕಳವು ಮಾಡುವಿಕೆ ಅಥವಾ ಸಣ್ಣ ಅಪರಾಧಗಳನ್ನು ಎಸೆಗುವಿಕೆ, ಸಂಚಾರ ನಿಯಮಗಳ ಉಲ್ಲಂಘನೆ ಅಥವಾ ಅಕ್ರಮವಾಗಿ ಗಡಿಯನ್ನು ದಾಟುವಿಕೆ ಇಂತಹ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವ ವಲಸಿಗರನ್ನು ದೇಶದಿಂದ ಹೊರಗೆ ಕಳುಹಿಸಲು ಹೊಸ ವಲಸೆ ಜಾರಿ ನೀತಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೃಹ ಭದ್ರತಾ ಇಲಾಖೆ ತಿಳಿಸಿದೆ. ಇದಕ್ಕೆ ಗೃಹ ಸಚಿವ ಜಾನ್ ಕೆಲ್ಲಿ ಸಹಿ ಮಾಡಿದ್ದಾರೆ.

ಭಯೋತ್ಫಾದನೆ ತಡೆಗಟ್ಟುವ ನೆಪದಲ್ಲಿ ಇತ್ತೀಚೆಗಷ್ಟೇ ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಭಾರೀ ವಿವಾದಕ್ಕೆ ಗುರಿಯಾಗಿ ನ್ಯಾಯಾಲಯದಿಂದ ಮುಖಭಂಗ ಅನುಭವಿಸಿ ಆ ನೀತಿಯಿಂದ ಹಿಂದೆ ಸರಿದಿದ್ದ ಟ್ರಂಪ್ ಈಗ ಹೊಸ ವಲಸೆ ನೀತಿ ಜಾರಿಗೊಳಿಸಿ ಮತ್ತೊಂದು ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ.

ಎಚ್1ಬಿ ವೀಸಾ ತೊಂದರೆ ನಿವಾರಣೆಗೆ ಮೋದಿ ಮನವಿ:

ಅಮೆರಿಕ ಸರ್ಕಾರ ಜಾರಿಗೊಳಿಸಿರುವ ಎಚ್1ಬಿ ವೀಸಾದಿಂದ ಭಾರತೀಯರಿಗೆ ಅನಾನುಕೂಲವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಮೆರಿಕ ಪೂರಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.   ಈ ವೀಸಾದ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಿರುವುದರಿಂದ ಭಾರತದ ಪ್ರತಿಭಾವಂತ ಕುಶಲ ಉದ್ಯೋಗಿಗಳು ಅಮೆರಿಕದಲ್ಲಿ ವಿನಾಕಾರಣ ತೊಂದರೆಯೊಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಟ್ರಂಪ್ ಸರ್ಕಾರ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ನರೇಂದ್ರ ಮೋದಿ ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin