ಅಮೇರಿಕ ಅಧ್ಯಕ್ಷ ಟ್ರಂಪ್ ಮೊದಲ ಭಾಷಣ, ಶ್ರೀನಿವಾಸ್ ಹತ್ಯೆ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

Trump--Speech

ವಾಷಿಂಗ್ಟನ್, ಮಾ.1: ಇಸ್ಲಾಮಿಕ್ ಜಗತ್ತಿನ ಮಿತ್ರರೂ ಸೇರಿದಂತೆ ವಿಶ್ವದ ಎಲ್ಲಾ ನಮ್ಮ ಮಿತ್ರ ರಾಷ್ಟ್ರಗಳನ್ನೂ ಕೂಡಿಕೊಂಡು ಇಸ್ಲಾಮಿಕ್ ಸ್ಟೇಟ್ (ಐಎಸ್‍ಐಎಸ್) ಭಯೋತ್ಪಾದನೆಯನ್ನು ಇ ಪ್ರಪಂಚದಿಂದಲೇ ನಿರ್ನಾಮ ಮಾಡುವುದೇ ನಮ್ಮ ಪ್ರಪ್ರಥಮ ಆದ್ಯತೆಯ ಕಾರ್ಯಕ್ರಮವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.   ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊಟ್ಟ ಮೊದಲ ಬಾರಿಗೆ ಅಮೆರಿಕ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಭಯೋತ್ಪಾದನೆಯನ್ನು ಮಟ್ಟ ಹಾಕಿ ಮೂಲೋತ್ಪಾಟನೆ ಮಾಡುವ ವರೆಗೂ ವಿರಮಿಸುವುದಿಲ್ಲ ಎಂದು ಘೋಷಿಸಿದರು.

ದೇಶದಲ್ಲಿ ಮತ್ತು ಪ್ರಪಂಚದ ಯಾವುದೇ ಭಾಗದಲ್ಲಿ ಮಾದಕ ದ್ರವ್ಯಗಳ ಕಳ್ಳ ಸಾಗಣೆಯಾಗಲೀ ಮಾರಾಟವಾಗಲಿ ನಡೆಯಬಾರದು. ಇಂತಹ ಕೃತ್ಯಗಳಿಂದ ನಮ್ಮ ಯುವಜನಾಂಗವನ್ನು ನಾವು ರಕ್ಷಿಸಬೇಕಾಗಿದೆ. ಭಯೋತ್ಪಾದನೆ, ಮಾದಕ ವಸ್ತು ಬಳಕೆ ಮತ್ತು ಹಿಂಸಾಚಾರಗಳು ದೇಶದಲ್ಲಿ ತಲೆಯೆತ್ತದಂತೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.  ಸತ್ಯ-ಸ್ವಾತಂತ್ರ್ಯ-ನ್ಯಾಯ ನಮ್ಮ ಅಸ್ತ್ರಗಳು. ಇವುಗಳನ್ನು ಕಾಯ್ದುಕೊಂಡು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸುವುದು ಇಂದು ನಮ್ಮ ಆಡಳಿತದ ಹೊಣೆಯಾಗಿದೆ. ಹಿಂಸೆ ಕ್ರೌರ್ಯಗಳು ಯಾರು ಯಾರ ವಿರುದ್ಧ ನಡೆಸಿದರೂ ಖಂಡನೀಯ ಎಂದು ಹೇಳಿದ ಟ್ರಂಪ್, ಭಾರತೀಯ ಟೆಕ್ಕಿ ಶ್ರೀನಿವಾಸ ಕೂಚಿಭೋಟ್ಲ ಅವರ ಹತ್ಯೆಯಾಗಲಿ, ಇತ್ತೀಚಿನ ಕೆಲವು ದಿನಗಳಿಂದ ನಡೆದಿರುವ ಜ್ಯೂಯಿಷ್ ಕೇಂದ್ರಗಳ ಮೇಲಿನ ದಾಳಿಯಾಗಲಿ ಸಮರ್ಥನೀಯವಲ್ಲ ಎಂದು ಪ್ರತಿಪಾದಿಸಿದರು.

ಈಗ ಸತ್ಯ-ಸ್ವಾತಂತ್ರ್ಯ-ನ್ಯಾಯದ ಬೆಳಕು ನಮ್ಮ ಕೈಯಲ್ಲಿದೆ. ಅದನ್ನು ಪ್ರತಿಯೊಬ್ಬ ಅಮೆರಿಕ ಪ್ರಜೆಯೂ ಮತ್ತೊಬ್ಬನಿಗೆ ವರ್ಗಾಯಿಸಬೇಕಾಗಿದೆ. ಇಂದು ನಾನು ಇಲ್ಲಿ ನಿಂತು ಒಗ್ಗಟ್ಟು ಮತ್ತು ನಮ್ಮ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದೇನೆ. ಈ ಮಾತುಗಳು ನನ್ನ ಹೃದಯಾಂತರಾಳದಿಂದ ಬಂದಂಥ ಮಾತುಗಲಾಗಿವೆ. ಅಮರಿಕದ ವಿಜಯ ಮತ್ತೊಮ್ಮೆ ಆರಂಭವಾಗಬೇಕಾಗಿದೆ. ಮತ್ತೊಮ್ಮೆ ಅಮೆರಿಕ ವಿಶ್ವದ ನಾಯಕತ್ವ ವಹಿಸಿ ತನ್ನ ಹಿರಿತನವನ್ನು ಮೆರೆಯಬೇಕಾಗಿದೆ. ಅಮೆರಿಕದ ವರ್ಚಸ್ಸು ದಿಗ್ದಿಗಂತಕ್ಕೆ ಪಸರಿಸಬೇಕಾಗಿದೆ. ಇದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಟ್ರಂಪ್ ತಿಳಿಸಿದರು.

ಅಮೆರಿಕದ ಹಿರಿಯತನದ ನೂತನ ಅಧ್ಯಾಯವೊಂದು ಇದೀಗ ಪ್ರಾರಂಭವಾಗಿದೆ. ನಮ್ಮ ದೇಶದ ಉದ್ದಗಲಕ್ಕೂ ಹೊಸ ರಾಷ್ಟ್ರೀಯ ಹೆಮ್ಮೆ ಉಕ್ಕಿ ಹರಿಯಲಿದೆ. ಆಶಾವಾದದ ಹೊಸ ಕನಸುಗಳು ಮತ್ತೆ ಕುಡಿಯೊಡೆಯಲಿವೆ. ಅಮೆರಿಕನ್ನರ ಸ್ಫೂರ್ತಿಯನ್ನು ಪುನರ್‍ನವೀಕರಿಸಬೇಕಾಗಿದೆ. ಮುಂದಾಳತ್ವ ವಹಿಸಿ ಅಮೆರಿಕ ಮತ್ತೊಮ್ಮೆ ಈ ವಿಶ್ವ ಸಮುದಾಯವನ್ನು ಮುನ್ನಡೆಸಲು ಶಕ್ತಿ-ಸಾಮಥ್ರ್ಯಗಳನ್ನು ಹೊಂದಿದೆ ಎಂಬ ಅಂಶವು ನಮ್ಮ ಮಿತ್ರ ಬಳಗಕ್ಕೆ ಮನವರಿಕೆಯಾಗಬೇಕಾಗಿದೆ.   ಶತ್ರುಗಳಿರಲಿ ಅಥವಾ ಮಿತ್ರರಿರಲಿ ವಿಶ್ವದ ಪ್ರತಿಯೊಂದು ದೇಶವೂ ಅಮೆರಿಕ ದೇಶ ಬಲಿಷ್ಠವಾಗಿದೆ, ಅಮೆರಿಕ ಪ್ರತಿಷ್ಠೆಯ ರಾಷ್ಟ್ರವಾಗಿದೆ ಮತ್ತು ಅಮೆರಿಕ ಹೆಮ್ಮೆ ಮತ್ತು ಮುಕ್ತವಾಗಿದೆ ಎಂದು ತಿಳಿಯುವಂತೆ ನಾವು ಮಾಡಬೇಕಾಗಿದೆ ಎಂದು ಟ್ರಂಪ್ ಕಾಂಗ್ರೆಸ್ ಸದಸ್ಯರ ಕರತಾಡನದ ಮಥ್ಯೆ ಘೋಷಿಸಿದರು.

ಇನ್ನು ಕೇವಲ ಒಂಭತ್ತು ವರ್ಷಗಳಲ್ಲಿ ಅಮೆರಿಕವು ತನ್ನ 250ನೆ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಅಮೆರಿಕ ತನ್ನ ಸ್ವಾತತ್ರ್ಯವನ್ನು ಘೋಷಿಸಿಕೊಂಡು ಅಂದಿಗೆ 250 ವರ್ಷಗಳು ತುಂಬಲಿದ್ದು ಇದು ವಿಶ್ವದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ಉಳಿಯಲಿದೆ.   ಈ ಹಿಂದಿನ ಕೆಲವು ದಶಕಗಳಲ್ಲಿ ನಡೆದಂತಹ ತಪ್ಪುಗಳು ಭವಿಷ್ಯದಲ್ಲಿ ನಡೆಯಲು ನಾನು ಬಿಡುವುದಿಲ್ಲ. ಕೆಲವು ವರ್ಷಗಳಿಂದ ಅಮೆರಿಕ ಅನೇಕ ಅಹಿತಕರ ಘಟನೆಗಳನ್ನು ಕಂಡಿದೆ. ಅದರಿಂದ ಪ್ರಜೆಗಳು ನೊಂದಿದ್ದಾರೆ. ಆದರೆ ಇನ್ನು ಮುಂದೆ ಅಂತಹವು ಪುನರಾವರ್ತನೆಯಾಗಬಾರದು. ನಮ್ಮ ಮಕ್ಕಳಿಗೆ ನಾವು ಏನನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಬಗ್ಗೆ ಚಿಂತನೆ ನಡೆಸಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin