‘ಅಮೇರಿಕ ಬಿಟ್ಟು ತೊಲಗಿ’ ಎಂದು ಗುಂಡುಹಾರಿಸಿ ಭಾರತೀಯ ಇಂಜಿನಿಯರ್’ನ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Indian-Kiled

ವಾಷಿಂಗ್ಟನ್, ಫೆ.24-ಅಮೆರಿಕದಲ್ಲಿರುವ ಉದ್ಯೋಗಸ್ಥ ಭಾರತೀಯರ ಹತ್ಯಾಕಾಂಡ ಮತ್ತೆ ಮರುಕಳಿಸಿದೆ. ಅಮೆರಿಕ ಪ್ರಜೆಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಎಂಜಿನಿಯರೊಬ್ಬರು ಮೃತಪಟ್ಟು, ಇನ್ನಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಕಾನ್‍ಸಾನ್‍ನಲ್ಲಿ ನಿನ್ನೆ ನಡೆದಿದೆ. ಈ ಕೃತ್ಯ ಎಸಗಿದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.
ಜರ್ಮನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್ ಕುಚಿಭೋಟ್ಲಾ (32) ಹಂತಕನ ಗುಂಡಿಗೆ ಬಲಿಯಾದ ನತದೃಷ್ಟ ಎಂಜಿನಿಯರ್. ಈ ದಾಳಿಯಲ್ಲಿ ಅಲೋಕ್ ಮದಸಾನಿ ಮತ್ತು ಸಹದ್ಯೋಗಿ ಐಯಾನ್ ಗ್ರಿಲ್ಲೋಟ್ ಸಹ ಗಾಯಗೊಂಡಿದ್ದಾರೆ. ಕೃತ್ಯ ಎಸಗಿದ 51 ವರ್ಷದ ಆಡಮ್ ಪುರಿನ್‍ಟಾನ್‍ನನ್ನು ಹತ್ಯೆ ನಡೆದ ಐದು ಗಂಟೆಗಳ ಒಳಗೆ ಪೊಲೀಸರು ಬಂಧಿಸಿದ್ದಾರೆ.
ಈ ಮೂವರ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಆಡಮ್ ನನ್ನ ದೇಶದಿಂದ ತೊಲಗಿ ಎಂದು ಕೂಗಾಡುತ್ತಾ ಗುಂಡು ಹಾರಿಸಿ ಪರಾರಿಯಾದ. ಇದು ದ್ವೇಷ ಮತ್ತು ಅಸಹಿಷ್ಣುತೆಯ ಅಪರಾಧ ಕೃತ್ಯ ಎಂದು ಓಲಾಥೆ ಪೊಲೀಸ್ ಮುಖ್ಯಸ್ಥ ಸ್ಟೀವನ್ ಮೆಂಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆಸಿ ಮಿಸ್ಸೌರಿಯ ಕ್ಲಿಂಟನ್ ಪ್ರದೇಶದಲ್ಲಿ ಬಾರ್‍ವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ಆಡಮ್‍ನನ್ನು ಬಂಧಿಸಲಾಗಿದೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ ಈತ ತಾನು ಈ ಹಿಂದೆ ಮಧ್ಯಪ್ರಾಚ್ಯದ ಇಬ್ಬರನ್ನು ಕೊಂದಿದ್ದಾಗಿ ಬಾರ್ ಪರಿಚಾರಕನಿಗೆ ತಿಳಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.   ಆಡಮ್‍ನನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದು, ಮತ್ತಷ್ಟು ಕೃತ್ಯಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

ನಮ್ಮ ದೇಶವನ್ನು ಬಿಟ್ಟು ತೊಲಗಿ :

‘ನಮ್ಮ ದೇಶವನ್ನು ಬಿಟ್ಟು ತೊಲಗಿ’ ಎಂದು ಕೂಗಿರುವ ದುಷ್ಕರ್ಮಿಯೊಬ್ಬ ಇದ್ದಕ್ಕಿದ್ದಂತೆ ಶ್ರೀನಿವಾಸ್ ಕುಂಚಿಬೊಟ್ಲ ಅವರ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಸುಷ್ಮಾ ಸ್ವರಾಜ್ ಖಂಡನೆ :

ಭಾರತೀಯ ಎಂಜಿನಿಯರ್ ಶ್ರೀನಿವಾಸ್ ಅವರ ಹತ್ಯೆ ಕೃತ್ಯವನ್ನು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಖಂಡಿಸಿದ್ದಾರೆ. ಇಂಥ ಕೃತ್ಯಗಳು ಮರುಕಳಿಸದಂತೆ ಅಮೆರಿಕ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಭಾರತದ ಉದ್ಯೋಗಿಗಗಳಿಗೆ ರಕ್ಷಣೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin