ಅಮೇಸ್ಟಿ ಆರೋಪಿಗಳ ರಕ್ಷಣೆಗೆ ನಿಂತ ಕಾಂಗ್ರೆಸ್ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

amesty

ನವದೆಹಲಿ, ಆ.18- ಅಮೇಸ್ಟಿ ಪ್ರಕರಣದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದೆ ಮೃದು ಧೋರಣೆಯಿಂದ ವರ್ತಿಸುವಂತೆ ಕಾಂಗ್ರೆಸ್ನ ದೆಹಲಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರ ಮೇಲೆ ಒತ್ತಡ ಹೇರಿರುವು ಮಾಹಿತಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಗರದ ಥಿಯೋಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯನ್ ಸಂಘಟನೆ ಕಾಶ್ಮೀರ ಸಂಘರ್ಷ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ದೇಶ ವಿರೋಧಿ ಘೋಷಣೆ ಭಾಷಣ ಹಾಗೂ ಸೈನಿಕರಿಗೆ ಅವಮಾನ ಹೇಳಿಕೆ ಕುರಿತು ದಾಖಲಾಗಿರುವ ದೂರಿನ ಸಂಬಂಧ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು ಎಂದು ಒತ್ತಡ ಹೇರಲಾಗುತ್ತಿದೆ.  ಕಾಂಗ್ರೆಸ್ ನಾಯಕರಾದ ದಿಗ್ವೀಜಯ್ ಸಿಂಗ್, ಅಂಬಿಕಾ ಸೋನಿ ಅವರು ಮುಖ್ಯಮಂತ್ರಿಯವರಿಗೆ ದೂರವಾಣಿ ಕರೆ ಮಾಡಿ ಆಮ್ನೆಸ್ಟಿ ಸಂಘಟನೆ ಮುಖಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಯಾವುದೇ ದೇಶದ್ರೋಹದಂತಹ ಘಟನೆಗಳು ನಡೆದಿಲ್ಲ. ಘೋಷಣೆಗಳು ಕೂಗಿದ್ದರೆ ಅದು ದೇಶದ್ರೋಹವಾಗುವುದಿಲ್ಲ. ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ದಿಗ್ವಿಜಯ ಸಿಂಗ್ ಅವರು ಟ್ವಿಟ್ ಮಾಡಿದ್ದಾರೆ. ಈ ಮೂಲಕ ಅವರು ಆಮ್ನೆಸ್ಟಿ ಸಂಘಟನೆಯ ಕಾರ್ಯಕ್ರಮವನ್ನು ನೇರವಾಗಿ ಸಮರ್ಥಿಸಿಕೊಂಡಿದ್ದಾರೆ.  ಕೇವಲ ಘೋಷಣೆ ಹಾಕಿದರೆ ಅದು ದೇಶದ್ರೋಹ ಎಂದು ಕರೆಯಲಾಗದು. ಬ್ರಿಟೀಷರ ಕಾಲದಲ್ಲಿ ಸ್ವಾತಂತ್ರ್ಯ ಯೋಧರ ವಿರುದ್ಧ ದೇಶದ್ರೋಹ ಕಾನೂನನ್ನು ಬಳಸಲಾಗುತ್ತಿತ್ತು. ತನಿಖೆ ಮುಕ್ತಾಯವಾಗುವವರೆಗೂ ಯಾರನ್ನು ಬಂಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಭರವಸೆ ನೀಡಿದ್ದಾರೆ ಎಂದು ಟ್ವಿಟ್ನಲ್ಲಿ ತಿಳಿಸಿರುವ ಅವರು ಈ ಮೂಲಕ ಆಮ್ನೆಸ್ಟಿ ಸಂಘಟನೆ ಸದಸ್ಯರಿಗೆ ಅಭಯ ನೀಡಿದ್ದಾರೆ.

ಇನ್ನೂ ರಾಷ್ಟ್ರೀಯ ಸುದ್ದಿವಾಹಿನಿಗಳಿಗೆ ಸಂದರ್ಶನ ನೀಡಿರುವ ಅಂಬಿಕಾ ಸೋನಿ ಅವರು, ಘೋಷಣೆ ಕೂಗಿದಾಕ್ಷಣ ಅದು ದೇಶ ದ್ರೋಹವಾಗುವುದಿಲ್ಲ. ಎಫ್ಐಆರ್ ದಾಖಲಿಸಿ ತನಿಖೆ ನಡೆಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ ಎಂದು ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧವೇ ಹರಿ ಹಾಯ್ದಿದ್ದಾರೆ.  ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳುತ್ತಾ ಬಂದಿದ್ದರು. ಆದರೆ ಹೈ ಕಮಾಂಡ್ ಒತ್ತಡಕ್ಕೆ ಮಣಿದಿರುವ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣ ನಡೆದು ನಾಲ್ಕು ದಿನಗಳವರೆಗೂ ಮೌನವಾಗಿದ್ದ ದೆಹಲಿ ನಾಯಕರು, ಎಬಿವಿಪಿ ಬೀದಿಗಿಳಿಯುತ್ತಿದ್ದಂತೆ ರಾಜಕೀಯವರಸೆಗಳನ್ನು ಆರಂಭಿಸಿದ್ದಾರೆ.

ಶನಿವಾರ ಈ ಸಂಘಟನೆ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಲವರು ಕಾಶ್ಮೀರದಲ್ಲಿ ಸೇನೆಯಿಂದ ನಮಗೆ ಸ್ವಾತಂತ್ರ್ಯ ಬೇಕು ಎಂದು ಘೋಷಣೆ ಕೂಗಿದರು. ಅಲ್ಲದೆ ದೇಶ ವಿರೋಧಿ ಘೋಷಣೆಗಳನ್ನು ಕೂಗಿದರು ಎಂದು ಆರೋಪ ಕೇಳಿ ಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಎಬಿವಿಪಿ ದೂರು ದಾಖಲಿಸಿತ್ತು. ಅಲ್ಲದೆ ನಿನ್ನೆ ಮತ್ತು ಇಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಕೂಡ ನಡೆಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ಆಮ್ನೆಸ್ಟಿ ಸಂಘಟನೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದಾರೆ ಎನ್ನಲಾದ ಅಂಶ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin