‘ಅಮ್ಮಂದಿರ ದಿನ’ದ ಅಂಗವಾಗಿ ಈ ಲೇಖನ

ಈ ಸುದ್ದಿಯನ್ನು ಶೇರ್ ಮಾಡಿ

Amma--01

ಪ್ರಶಾಂತ್ ಕುಮಾರ್ ಎ. ಪಿ.,
ಉಪನ್ಯಾಸಕರು, ತುಮಕೂರು
ಜನ್ಮ ನೀಡಿದ ತಾಯಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದವರು. ನಾವು ಯಾರು ಸ್ವರ್ಗವನ್ನು ನೋಡಿಯೇ ಇಲ್ಲ. ನಮ್ಮ ಕಲ್ಪನೆಯಲ್ಲಿ ಸ್ವರ್ಗವೆಂದರೆ, ದೇವರು ವಾಸಿಸುವ ಸ್ಥಳ. ಆದರೆ ನಾವೆಲ್ಲ ನಿಜವಾಗಿಯೂ ಇರುವುದು ಸ್ವರ್ಗದಲ್ಲಿಯೇ. ಕಾರಣ ನಾವು ಜನಿಸಿರುವ ನಾಡೇ ಸ್ವರ್ಗಕ್ಕೆ ಸಮಾನ, ನಮಗೆ ಜನ್ಮವನ್ನು ನೀಡಿದ ತಾಯಿಯೇ ನಿಜವಾದ ದೇವರು. ಹಾಗಾಗಿಯೇ ಅಲ್ಲವೆ ಮಾತೃ ದೇವೋಭವ ಎಂದು ತಿಳಿದವರು ನುಡಿದಿರುವುದು.

ಅಮ್ಮ ಎಂಬ ಅಮೃತದಂತಹ ನುಡಿಯಲ್ಲಿ ಆನಂದ ಅಡಗಿಹುದು. ಆಕೆ ತ್ಯಾಗಮಯಿ, ಕರುಣಾಮಯಿ, ವಾತ್ಸಲ್ಯಮಯಿ. ತಾಯಿಯಾದವಳು ಒಂಬತ್ತು ತಿಂಗಳು ತನ್ನ ಮಗುವನ್ನು ಹೊತ್ತು, ಹೆರಿಗೆಯ ಸಮಯದಲ್ಲಿ ಅಸಾಧ್ಯವಾದ ನೋವನ್ನು ಅನುಭವಿಸಿ, ತನ್ನ ಕರುಳ ಕುಡಿಗೆ ಜನ್ಮ ನೀಡುತ್ತಾಳೆ. ಆ ಕ್ಷಣ ಆಕೆಗೆ ಪುನರ್ಜನ್ಮದಂತೆಯೇ ಸರಿ. ಆದರೂ ತನ್ನ ಮಗುವಿನ ಮುಖವನ್ನು ನೋಡಿದ ಕ್ಷಣ, ಆ ನೋವನ್ನೆಲ್ಲಾ ಮರೆಯು ತ್ತಾಳೆ. ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನವಾಗಿ ಬೆಳೆಸುತ್ತಾಳೆ. ತನ್ನ ಜೀವನದ ಬಹು ಪಾಲು ಸಮಯವನ್ನು ಮಗುವಿನ ಲಾಲನೆ, ಪಾಲನೆ, ಬೇಕು- ಬೇಡಗಳನ್ನು ಪೂರೈಸುವಲ್ಲಿಯೇ ಮುಡಿಪಾಗಿಡುತ್ತಾಳೆ.

ಸಂಸಾರವೆಂಬ ನೌಕೆಯ ಪ್ರಯಾಣದಲ್ಲಿ, ದೈತ್ಯ ಅಲೆಗಳಂತೆ ಬರುವ ಎಲ್ಲಾ ಕಷ್ಟ-ನೋವುಗಳನ್ನು ತಾನೇ ಅನುಭವಿಸುತ್ತಾಳೆ. ಆ ನೋವಿನ ಛಾಯೆ, ತನ್ನ ಮಗುವಿನ ಮೇಲೆ ಬೀಳದಂತೆ ಜೋಪಾನ ಮಾಡುತ್ತಾಳೆ. ತನ್ನ ಮಗು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕೆಂಬ ಮಹತ್ತರ ಆಸೆಯಿಂದ, ಹಗಲು ರಾತ್ರಿ ತನ್ನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಾಳೆ. ತಾನು ಅನುಭವಿಸಿದ ಕಷ್ಟ- ಕಾರ್ಪಣ್ಯಗಳು ತನ್ನ ಮಗುವಿಗೆ ಬರಬಾರದೆಂದು ಅವಿರತವಾಗಿ ರಕ್ಷಿಸುತ್ತಾಳೆ. ತನ್ನ ಕನಸುಗಳನ್ನು ನನ್ನ ಮಗ ಅಥವಾ ಮಗಳು ನನಸು ಮಾಡುತ್ತಾರೆ ಎಂಬ ಆಶಾಭಾವನೆಯಿಂದ ಅವರಿಗೆ ಅಗತ್ಯವಿರುವ ಮËಲ್ಯಗಳನ್ನು, ಗುಣಗಳನ್ನು ಕಲಿಸುತ್ತಾಳೆ.

ಪತಿಯೇ ಪರದೈವ ಎಂದು ತಿಳಿದು, ಪತಿಯ ಸೇವೆಯನ್ನು ಅಹರ್ನಿಶಿ ಮಾಡುತ್ತಾಳೆ. ಜೊತೆಗೆ, ತನ್ನ ಅತ್ತೆ-ಮಾವಂದಿರನ್ನು ತಂದೆ ತಾಯಿಯರ ರೀತಿ ನೋಡಿಕೊಳ್ಳುತ್ತಾಳೆ. ಕೆಲವೊಮ್ಮೆ, ಪತಿಯು ಸಂಸಾರದ ಜವಬ್ದಾರಿಯನ್ನು ಹೊರಲು ಸಾಧ್ಯವಾಗದಿದ್ದಾಗ, ತಾನೇ ಆ ಜವಾಬ್ದಾರಿಯನ್ನು ತೆಗೆದುಕೊಂಡು ಧೈರ್ಯವಾಗಿ ನಿಭಾಯಿಸುತ್ತಾಳೆ. ಇದಾವುದು ತನ್ನ ಮಕ್ಕಳ ಮೇಲೆ ಪರಿಣಾಮ ಬೀರಬಾರದು ಹಾಗು ಅವರ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ಕಾಳಜಿ ವಹಿಸುತ್ತಾಳೆ. ಇಷ್ಟೆಲ್ಲಾ ನೋವು, ಭಾರಗಳನ್ನು ಹೊರು ವುದರಿಂದ ಅಲ್ಲವೇ ಆಕೆಯನ್ನು ನಮ್ಮೆಲ್ಲರನ್ನು ಸಾಕಿ ಸಲುಹುತ್ತಿರುವ ಭೂಮಿಗೆ ಹೋಲಿಸಿ ಧರಿತ್ರಿ ಎಂದು ಕರೆಯುವುದು.
ಮಕ್ಕಳು ಎಷ್ಟೇ ಕುರೂಪಿಗಳಾಗಿದ್ದರೂ, ತನ್ನ ತಾಯಿಗೆ ಅವರೇ ಭೂಮಿಯ ಮೇಲಿರುವ ಸುಂದರ ವ್ಯಕ್ತಿಗಳು. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂಬ ನಾಣ್ಣುಡಿಯಂತೆ, ತನ್ನ ಮಕ್ಕಳು ಏನೇ ತಪ್ಪು ಮಾಡಿದರೂ, ಆಕೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ಶಿಕ್ಷಿಸದೇ, ಕ್ಷಮಿಸಿ, ಬುದ್ಧಿವಾದ ಹೇಳುವಂತಹ ಕ್ಷಮಯಾ ಧರಿತ್ರಿ ತಾಯಿ.

ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ತಾಯಿಯೇ ಮುಖ್ಯ ಕಾರಣಳಾಗಿರುತ್ತಾಳೆ. ಹಾಗಾಗಿಯೇ ಅಲ್ಲವೇ, ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂದು ತಿಳಿದವರು ಹೆಮ್ಮೆಯಿಂದ ನುಡಿದಿರುವುದು. ಉದಾಹರಣೆಗೆ, ಶಿವಾಜಿ ಮರಾಠ ಸಂಸ್ಥಾನದ ಕೀರ್ತಿಯನ್ನು ಉತ್ತುಂಗಕ್ಕೇರಿಸಲು ಮುಖ್ಯ ಕಾರಣ ಆತನ ತಾಯಿ ಜೀಜಾ ಬಾಯಿ. ಆಕೆ ಹೇಳುತ್ತಿದ್ದ ಧೈರ್ಯ, ಸಾಹಸದ ಕಥೆಗಳು, ಶಿವಾಜಿ ಯಲ್ಲಿ ಅಸಾಧ್ಯ ವಾದುದನ್ನು ಸಾಧ್ಯವಾಗುವಂತೆ ಮಾಡುತ್ತಿದ್ದವು. ತನ್ನ ಮಕ್ಕಳು ಸಾಧನೆಯೊಂದನ್ನು ಮಾಡಿದರೆ, ಹೆಚ್ಚು ಸಂತೋಷ, ಆನಂದವಾಗುವುದು ತಾಯಿಗೆ. ಸಮಾಜದ ಜನರು ಎಂದಾದರೊಮ್ಮೆ, ಎಂತಹ ಒಳ್ಳೆಯ ಮಕ್ಕಳಿಗೆ ಜನ್ಮ ನೀಡಿದ್ದೀಯ ಅಮ್ಮ ಎಂದರೆ, ಅಂದು ತಾಯಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಜಗತ್ತಿನಲ್ಲಿ ತನಗಾಗಿ ಏನನ್ನು ಬಯ ಸದೇ, ತನ್ನ ಸರ್ವಸ್ವವನ್ನು ಮಕ್ಕಳ, ಸಂಸಾರದ ಏಳಿಗೆಗಾಗಿ ಮುಡಿಪಾಗಿಡುವ ಇಡೀ ವಿಶ್ವದ ಏಕೈಕ ಜೀವವೆಂದರೆ ಅದು ತಾಯಿ ಮಾತ್ರ.
ಇದರಿಂದಲೇ ಅಲ್ಲವೇ, ಮಹನಿಯರು ತಾಯಿಯನ್ನು ದೇವರಿಗೆ ಹೋಲಿಸಿರುವುದು ಮತ್ತು ಕೆಲವರು ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದು ನುಡಿದಿರು ವುದು. ಅಮ್ಮ ಎಂಬ ಪದ ನಮ್ಮ ಸುಖ- ದುಃಖಗಳೆರೆಡು ಸಮಯದಲ್ಲಿಯೂ ನಮಗೆ ಅರಿವಿಲ್ಲದಂತೆ ನಮ್ಮ ಬಾಯಿಯಲ್ಲಿ ಬರುತ್ತದೆ. ಅಮ್ಮ ಎಂಬ ಪದದಲ್ಲಿಯೇ ಅಷ್ಟೊಂದು ಶಕ್ತಿ, ಆನಂದ ಅಡಗಿದೆ.

ಆದರೆ, ಪ್ರಸ್ತುತ ಸಂದರ್ಭದಲ್ಲಿ ಜೀವಂತ ದೇವರಾದ ತಾಯಿ ಯನ್ನು ಎದುರಲ್ಲಿಟ್ಟು ಕೊಂಡು, ಜೀವವಿಲ್ಲದ ಕಲ್ಲು, ಮಣ್ಣುಗಳಿಂದ ಉದ್ಭವವಾಗಿರುವ ದೇವರನ್ನು ನೋಡಲು ಹೆಚ್ಚಿನ ಜನರು ಅಲೆಯುತ್ತಾರೆ, ಹಾ ತೊರೆಯುತ್ತಾರೆ. ಹೀಗೆ ಮಾಡಿದ್ದೇ ಆದಲ್ಲಿ, ಆ ದೇವರು ಕೂಡ ನಮ್ಮನ್ನು ನೋಡಿ ನಗುತ್ತಾನೆ. ಕಾರಣ, ನನ್ನನ್ನು ನೀನು ಬಯಸಿ ದಾಗ ನೋಡಲು ಸಾಧ್ಯವಿಲ್ಲ ಎಂದೇ, ನಿನ್ನ ಜೊತೆಯಲ್ಲಿ ಯಾವಾಗಲೂ ಇರುವಂತೆ ಅಮ್ಮ ಎಂಬ ದೇವರನ್ನು ಸೃಷ್ಟಿಸಿರುವುದು ಎಂದು.

ಆತ್ಮಿಯರೇ ನೆನಪಿಡಿ, ದೇವರು ಎಲ್ಲಿಯೂ ಇಲ್ಲ. ನಮ್ಮ ತಂದೆ-ತಾಯಿಯೇ ನಿಜವಾದ ದೇವರು. ಅವರು ಇರುವ ಮನೆಯೇ ದೇವಸ್ಥಾನ. ನಾವೆಲ್ಲ ಅವರ ಭಕ್ತರು. ಆ ದೇವರಿಂದ ಆಶೀರ್ವಾದ ಸಿಗುವಂತೆ ನಾವು ಅವರನ್ನು ನೋಡಿಕೊಳ್ಳಬೇಕೆ ಹೊರತು , ಶಾಪ ಸಿಗುವಂತೆ ಅಲ್ಲ. ಅಂತಹ ಪರಮಶಕ್ತಿಯುಳ್ಳ ದೇವರುಗಳನ್ನು ದೇವಸ್ಥಾನ ದಲ್ಲಿಯೇ ಪೂಜಿಸಿ, ವೃದ್ದಾಶ್ರಮಗಳಲ್ಲಿ ಅಲ್ಲ. ಏಕೆಂದರೆ, ಪ್ರತಿಯೊಬ್ಬರು ಒಂದಲ್ಲಾ ಒಂದು ದಿನ ತಂದೆ- ತಾಯಿಯ ಸ್ಥಾನಕ್ಕೆ ಬರುತ್ತಾರೆ. ಆಗ ನಿಮ್ಮ ಮಕ್ಕಳು ನಿಮ್ಮನ್ನು ದೇವರಂತೆ ಕಾಣ ಬೇಕಲ್ಲವೇ?

Facebook Comments

Sri Raghav

Admin