ಅಮ್ಮನವರ ಬಂಗಾರದ ಮುಖಪದ್ಮ, 2 ಬೆಳ್ಳಿ ಪುಟ್ಟಿ ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

datta

ಕಡೂರು, ಫೆ.9- ಮುಜರಾಯಿ ಇಲಾಖೆಗೆ ಒಳಪಡುವ ಅಂತರಘಟ್ಟ ಅಮ್ಮನವರ ಆಭರಣಗಳನ್ನು ಕಳೆದ 40 ವರ್ಷಗಳಿಂದ ತೆರೆದಿರಲಿಲ್ಲ. ಇದೀಗ ಶಾಸಕ ದತ್ತ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿ, ತಹಸೀಲ್ದಾರ್, ದೇವಾಲಯದ ಧರ್ಮದರ್ಶಿ, ಗ್ರಾಮಸ್ಥರ ಸಮ್ಮುಖದಲ್ಲಿ ಖಜಾನೆ ಬೀಗ ತೆಗೆದು ನೋಡಿದಾಗ ಎರಡು ಆಭರಣಗಳು ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ.ಯಗಟಿ ಗ್ರಾಮದ ತಮ್ಮ ಸ್ವಗೃಹದಲ್ಲಿ ಮಾಧ್ಯಮದವರಿಗೆ ಅಂತರಘಟ್ಟಮ್ಮನವರ ಆಭರಣ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಣ್ಮರೆಯಾಗಿರುವ ಆಭರಣಗಳಾದ ಬಂಗಾರದ ಮುಖಪದ್ಮ ಹಾಗೂ ಬೆಳ್ಳಿ ತಾವರೆ ಹೂವಿನ ಎರಡು ಪುಟ್ಟಿಗಳು ಕಣ್ಮರೆಯಾದ ಬಗ್ಗೆ ಕಾರಣ ಕೇಳಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.

ಆಗಿನ ತಹಸೀಲ್ದಾರ್ ಆಗಿದ್ದ ಶಿವರಾಮಪ್ಪ ಮತ್ತು ದೇವಾಲಯದ ಕನ್ವೀನಿಯರ್ ದೇವೇಂದ್ರಪ್ಪ ಇವರುಗಳಿಗೆ ಕಾರಣ ಕೇಳಿ ಪತ್ರ ಬರೆಯಲಾಗಿದೆ. ಉಳಿದಿರುವ ಆಭರಣಗಳು ಅಮ್ಮನವರಿಗೆ ತೊಡಿಸುವ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಈ ಬಾರಿ ಜಾತ್ರೆಗೂ ಸಹ ಅಮ್ಮನವರಿಗೆ ಆಭರಣ ಲಭ್ಯವಾಗುತ್ತಿಲ್ಲವೆಂದು ತಿಳಿಸಿದರು. ಬೆಳ್ಳಿಯ ಆಭರಣಗಳೂ ಸಹ ಕಂದು ಬಣ್ಣವಾಗಿವೆ. ನಮ್ಮಗಳ ಅಪೇಕ್ಷೆ ಈಡೇರಲಿಲ್ಲ. ಬಂಗಾರದ ಆಭರಣಗಳನ್ನು ಗ್ರಾಂ ಲೆಕ್ಕದಲ್ಲಿ ತೂಕ ಮಾಡಿಸಿ, ಶುದ್ಧೀಕರಿಸಿ ಪುನರ್ ಆಭರಣಗಳನ್ನು ಮಾಡಿಸಿ ಮುಂದಿನ ಜಾತ್ರೆಗೆ ಬಳಕೆ ಮಾಡಲಾಗುವುದು ಎಂದರು.ಸರ್ಕಾರದ ಸುತ್ತೋಲೆಯ ಪ್ರಕಾರ ಬೆಳ್ಳಿಯ ಆಭರಣಗಳನ್ನು ಶುದ್ಧೀಕರಿಸಬಹುದಾಗಿದೆ. ಜಿಲ್ಲಾಧಿಕಾರಿಗಳು, ದೇವಾಲಯ ಸಮಿತಿ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಆಭರಣಗಳ ತಪಶೀಲು ಮಾಡಿಸಿ ಅಮ್ಮನವರಿಗೆ ಬೆಳ್ಳಿ ಮಂಟಪ ಮಾಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ತಾಲ್ಲೂಕಿನ ಅತ್ಯಂತ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಅಂತರಘಟ್ಟೆ ಅಮ್ಮನವರ ಜಾತ್ರೆಯು ಈಗಾಗಲೇ ಪ್ರಾರಂಭವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರುಗಳು ಆಗಮಿಸುತ್ತಿದ್ದಾರೆ. ಅತೀ ಹೆಚ್ಚು ಎತ್ತಿನ ಗಾಡಿಗಳು ಜಾತ್ರೆಗೆ ಬರುವುದರಿಂದ ಬರುವ ರಾಸುಗಳಿಗೆ 8 ಕುಡಿಯುವ ನೀರಿನ ತೊಟ್ಟಿಗಳನ್ನು ಕಟ್ಟಿಸಲಾಗಿದೆ ಎಂದು ವಿವರಿಸಿದರು. ಭಕ್ತರಿಗೆ ಕುಡಿಯುವ ನೀರಿನ ಎಲ್ಲಾ ರೀತಿಯ ವ್ಯವಸ್ಥೆಯನ್ನು ದೇವಾಲಯ ಸಮಿತಿಯಿಂದ ಮಾಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಭಕ್ತರಿಗೆ ಆರೋಗ್ಯ ದೃಷ್ಟಿಯಿಂದ ಆ್ಯಂಬ್ಯುಲೆನ್ಸ್ ಹಾಗೂ 108 ವಾಹನವನ್ನು ಇರಿಸಲಾಗಿದೆ. 4 ಜನ ವೈದ್ಯರು, 15 ಜನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.  ಎಲ್ಲಾ ರೀತಿಯ ಔಷಧಿಗಳು ದಾಸ್ತಾನಿವೆ. ಅಗ್ನಿಶಾಮಕ ದಳ ಮೊಕ್ಕಾಂ ಹೂಡಲಿದೆ. ಹೆಚ್ಚಿನ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಧರ್ಮದರ್ಶಿಗಳು, ಗ್ರಾಮದ  ಮುಖಂಡರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin