ಅಮ್ಮನ ಜಾಗಕ್ಕೆ ಚಿನ್ನಮ್ಮ : ತಮಿಳುನಾಡು ನೂತನ ಸಿಎಂ ಆಗಿ ಶಶಿಕಲಾ ನಟರಾಜನ್‍ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Jayalalitha-0235

ಚೆನ್ನೈ, ಡಿ.30– ಜಯಲಲಿತಾ ಪರಮಾಪ್ತೆ ಹಾಗೂ ಚಿನ್ನಮ್ಮ ಖ್ಯಾತಿಯ ಶಶಿಕಲಾ ನಟರಾಜನ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಚೆನ್ನೈನಲ್ಲಿ ಇಂದು ಸಂಜೆ ನಡೆಯಲಿರುವ ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯ ನಂತರ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಜೆ.ಜಯಲಲಿತಾ ಸಾವಿನ ನಂತರ ತೆರವಾಗಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಿರೀಕ್ಷೆಯಂತೆ ಅವರ ಗೆಳತಿ ನಿನ್ನೆ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಇಂದು ಸಂಜೆ ಚೆನ್ನೈನ ರಾಯಪೇಟದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಶಾಸಕರ ಸಭೆ ನಡೆಯಲಿದೆ. 134 ಶಾಸಕರು ಶಾಸಕಾಂಗ ಪಕ್ಷದ ನೂತನ ನಾಯಕಿಯನ್ನಾಗಿ ಶಶಿಕಲಾ ನಟರಾಜನ್ ಅವರನ್ನು ಆಯ್ಕೆ ಮಾಡಲಿದ್ದಾರೆ. ಇದರೊಂದಿಗೆ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೇರಲಿದ್ದಾರೆ.

ಅದೃಷ್ಟವಂತೆ ಶಶಿಕಲಾ :

ಶಶಿಕಲಾ ನಟರಾಜನ್ ಜಯಲಲಿತಾರ ಸರ್ವಸ್ವವೂ ಆಗಿದ್ದರು. ಜಯಾರ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಅಗಿದ್ದುಂಟು ಎಂದು ಜಯಾರ ಆಪ್ತ ವಲಯ ಬಣ್ಣಿಸುತ್ತಿದ್ದರು. ಇಂಥ ಶಶಿಕಲಾ ಅಂದ ಕಾಲತ್ತಿಲ್ ಜಯಲಲಿತಾರ ಸಾಕ್ಷ್ಯಚಿತ್ರ ನಿರ್ಮಿಸುವ ಸಲುವಾಗಿ ಪುರುಚ್ಚಿ ತಲೈವಿಯನ್ನು ಭೇಟಿ ಮಾಡಿದ್ದರು. ಅವರ ವಿಶ್ವಾಸ ಮತ್ತು ಗೆಳೆತನ ಸಂಪಾದಿಸಿ ಶಶಿಕಲಾ ಪಕ್ಷದ ಮುಖ್ಯಸ್ಥೆಯಾಗಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗುವ ಮಟ್ಟಕ್ಕೂ ಬೆಳೆದಿದ್ದು ಬೆರಗು ಮೂಡಿಸುತ್ತದೆ.

ಹಿನ್ನೆಲೆ :

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಶಶಿಕಲಾರ ಪತಿ ನಟರಾಜನ್ ಉದ್ಯೋಗ ಕಳೆದುಕೊಂಡಿದ್ದರು. ಕುಟುಂಬ ನಿರ್ವಹಣೆಗಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಿ ಅಥವಾ ಗಿರವಿ ಇಟ್ಟು ಶಶಿಕಲಾ ಸಂಸಾರ ನಿಭಾಯಿಸಿದ್ದರು. 1980ರಲ್ಲಿ ಅವರ ಪತ್ನಿಗೆ ಉದ್ಯೋಗ ಲಭಿಸಿತು. ಶಶಿಕಲಾ ವಿಡಿಯೋ ಬಾಡಿಗೆ ನೀಡುವ ಅಂಗಡಿ ತೆರೆದಿದ್ದರು. ಶಶಿಕಲಾ ಮತ್ತು ಜಯಲಲಿತಾ ಅವರ ಸ್ನೇಹ ಸೇತುವೆ ಆರಂಭವಾಗಿದ್ದು 80ರ ದಶಕದಲ್ಲಿ. ಎಂಜಿಆರ್ ಜೊತೆ ಜಯಲಲಿತಾ ಅವರು ರಾಜಕೀಯದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದರು. ಇದೇ ವೇಳೆ ಜಯಾರನ್ನು ಸಂಪರ್ಕಿಸಿದ ಅವರು ನಿಮ್ಮ ಸಾಕ್ಷ್ಯಚಿತ್ರ ನಿರ್ಮಿಸಲು ತಾವು ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡು ಭೇಟಿ ಮಾಡಿದ್ದರು. ಆ ಪರಿಚಯ ನಂತರ ಗಾಢ ಗೆಳೆತನಕ್ಕೆ ತಿರುಗಿತು.
ಜಯಲಲಿತಾರ ಕಷ್ಟಕಾಲ ಮತ್ತು ಯಶಸ್ಸಿನ ಉತ್ತುಂಗ ಎರಡರಲ್ಲೂ ಜೊತೆಗಿದ್ದು ನೋವು-ನಲಿವುಗಳಿಗೆ ಸ್ಪಂದಿಸಿದ್ದರು. 2011ರಲ್ಲಿ ಸ್ವಜನ ಪಕ್ಷಪಾತಕ್ಕಾಗಿ ಜಯಾರ ಕೆಂಗಣ್ಣಿಗೆ ಗುರಿಯಾಗಿದ್ದ ಶಶಿಕಲಾರನ್ನು ಇತರ 13 ಜನರೊಂದಿಗೆ ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು. ಅಲ್ಲದೇ ಮನೆಯಿಂದಲೂ ಹೊರಗಟ್ಟಿದ್ದರು.

ಜಯಾ ಅವರು ಆಸ್ಪತ್ರೆಯಲ್ಲಿದ್ದ ಎರಡು ತಿಂಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯ ಆರೈಕೆ ಮಾಡಿದ್ದರು. ಆದರೆ ಅವರು ಯಾರಿಗೂ ಜಯಾರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಜಯಾ ಸಾವಿಗೆ ಶಶಿಕಲಾರೇ ಕಾರಣ ಎಂಬ ಅಪಾದನೆಗಳ ನಡುವೆಯೂ ಪಕ್ಷದ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿರುವುದು ಅದೃಷ್ಟವಲ್ಲದೇ ಮತ್ತೇನು ? ಶಶಿಕಲಾ ನಟರಾಜನ್ ಅವರು ಜಯಾ ನಿಧನದ ಬಳಿಕ ಅವರ ಅಧಿಕೃತ ನಿವಾಸದಲ್ಲೇ ವಾಸ್ತವ ಹೂಡಿದ್ದರು.

Facebook Comments

Sri Raghav

Admin